
ಮೈಸೂರು: ‘ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಹುಲಿ ದಾಳಿಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿ ಬೆಣ್ಣೇಗೆರೆ ಗ್ರಾಮದಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಕುಟುಂಬಸ್ಥರು ಹಾಗೂ ರೈತ ಸಂಘಟನೆಗಳ ಮುಖಂಡರು ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರದ ಎದುರು ಸೋಮವಾರ ಪ್ರತಿಭಟಿಸಿದರು.
‘ಬೆಣ್ಣೇಗೆರೆ ಗ್ರಾಮವು ಅರಣ್ಯದಿಂದ 22 ಕಿ.ಮೀ ದೂರದಲ್ಲಿದೆ. ಈಚೆಗೆ 18 ಕಿ.ಮೀ ದೂರದಲ್ಲಿ ಹುಲಿ ದಾಳಿ ನಡೆದಿತ್ತು. ಆ ಸಮಯದಲ್ಲಿ ಬೆಣ್ಣೇಗೆರೆಗೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಹೆಜ್ಜೆಗಳನ್ನು ಗುರುತಿಸಿ ತೆರಳಿದ್ದರು. ಆದರೆ ಬೋನು ಇಡುವ ಕೆಲಸ ಮಾಡಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಲಿ ದಾಳಿ ನಡೆಸಿದಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
‘ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸಫಾರಿ ನಡೆಯುತ್ತದೆ. ಹುಲಿ ಕಂಡುಬಂದ ಸ್ಥಳಕ್ಕೆ ಅನೇಕ ವಾಹನಗಳು ಒಂದೇ ಸಮಯಕ್ಕೆ ಬಂದು ನಿಂತು ಗದ್ದಲ ಎಬ್ಬಿಸುವುದರಿಂದ ಅಲ್ಲಿಂದ ಅವು ನಾಡಿನ ಹಾದಿ ಹಿಡಿದಿವೆ. ಬೋನಿಗೆ ಬಿದ್ದ ಹುಲಿಗಳನ್ನು ಹತ್ತಿರದಲ್ಲೇ ಬಿಡುತ್ತಿರುವ ಕಾರಣ ಅವು ಮತ್ತೆ ನಾಡಿಗೆ ಬಂದು ಜನ, ಜಾನುವಾರಿನ ಮೇಲೆ ದಾಳಿ ನಡೆಸುತ್ತಿವೆ. ಈ ಬಗ್ಗೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಅಂತಿಮ ನಮನ ಸಲ್ಲಿಸಲು ಬಂದ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಸುತ್ತುವರಿದ ಮೃತರ ಕುಟುಂಬಸ್ಥರು ಹಾಗೂ ರೈತ ಮುಖಂಡರು ಘೇರಾವ್ ಹಾಕಿದರು.
ರೈತ ಮುಖಂಡ ಮಂಜು ಕಿರಣ್ ಸಚಿವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡರು, ‘ರೈತರ ಸಾವಿಗೆ ನೀವು ಹೊಣೆ, ಅವರನ್ನು ಕೊಲೆ ಮಾಡುತ್ತಿದ್ದೀರಿ. ಅರಣ್ಯ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ತಲೆ ಎತ್ತುತ್ತಿರುವ ಬಗ್ಗೆ ಸಂಘಟನೆಯವರು ದಾಖಲೆ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.
‘ಸಫಾರಿ ಹೆಸರಿನಲ್ಲಿ ಪ್ರಾಣಿಗಳಿಗೆ ತೊಂದರೆ ನೀಡುತ್ತಿರುವುದರಿಂದ ಅವು ಕಾಡಿನಿಂದ ನಾಡಿಗೆ ಬರುತ್ತಿವೆ. ನಿಮ್ಮ ಮೇಲೆ ಹುಲಿ ದಾಳಿ ಆಗುವುದಿಲ್ಲ. ನೀವು ವಿಧಾನಸೌಧದಲ್ಲಿ ಕುಳಿತಿರುತ್ತೀರಿ. ಇನ್ನೆಷ್ಟು ರೈತರು ಬಲಿಯಾಗಬೇಕು. ಗ್ರಾಮದಲ್ಲಿ ಆಕ್ರೋಶ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಸರಗೂರು ತಾಲ್ಲೂಕಿನಲ್ಲಿ ನಡೆಸದೆ ಮೈಸೂರಿಗೆ ತಂದಿದ್ದಾರೆ. ರೈತ ಮೃತಪಟ್ಟ ದಿನ ಸರಗೂರಿನಲ್ಲೇ ಇದ್ದರೂ ಸ್ಥಳಕ್ಕೆ ಆಗಮಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ನನಗೆ ಇಲ್ಲಿಗೆ ರೈತನ ಶವ ತಂದಿರೋದೆ ಗೊತ್ತಿಲ್ಲ. ನನ್ನ ಕಾರಣದಿಂದ ಶವ ಇಲ್ಲಿಗೆ ತಂದಿದ್ದರೆ ಅಕ್ಷಮ್ಯ ಅಪರಾಧ. ನಾನು ಕ್ಷೇಮೆ ಕೇಳುತ್ತೇನೆ ಹಾಗೂ ಮಾಹಿತಿ ಪಡೆದು ಕ್ರಮವಹಿಸುತ್ತೇನೆ. ಮೃತ ವ್ಯಕ್ತಿಗೆ ₹10 ಲಕ್ಷ ಪರಿಹಾರ ನೀಡಿದ್ದು, ₹20 ಲಕ್ಷಕ್ಕೆ ಏರಿಸಲು ಕ್ರಮವಹಿಸುತ್ತೇನೆ’ ಎಂದು ಭರವಸೆ ನೀಡಿದರು.
ಉಸ್ತುವಾರಿ ಸಚಿವ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರ ಅಹವಾಲು ಆಲಿಸಿದರು. ರೈತ ಮುಖಂಡರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ, ರೈತರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರಿಗೆ ಸೂಚಿಸಿದರು.
ಮೃತ ರಾಜಶೇಖರ್ ಪುತ್ರ ಶಿವು, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಹಳ್ಳಿಕೆರೆಹುಂಡಿ ಬಸವರಾಜು, ಹೊಸಕೋಟೆ ಬಸವರಾಜು ಇದ್ದರು.
‘ಕೋಲ್ಡ್ ಸ್ಟೋರೇಜ್ ಇಲ್ಲದಿರುವುದು ವಿಷಾದನೀಯ’
ಪ್ರತಿಭಟನಾ ಸ್ಥಳಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಭೇಟಿ ನೀಡಿದರು. ಬಳಿಕ ಮಾತನಾಡಿ ‘ಹೊಸ ತಾಲ್ಲೂಕಿನ ಘೋಷಣೆಯಾದ ಮೇಲೂ ಗಡಿ ತಾಲ್ಲೂಕಿನಲ್ಲಿ ಅಲ್ಲಿಗೆ ಅಗತ್ಯವಿರುವ ಮೂಲಸೌಕರ್ಯ ನೀಡದಿರುವುದು ವಿಷಾದನೀಯ. ಸರಗೂರಿನ ಶವಾಗಾರದಲ್ಲಿ ಕೋಲ್ಡ್ ಸ್ಟೋರೇಜ್ ಇಲ್ಲ ಎಂಬ ಕಾರಣಕ್ಕೆ ಮೈಸೂರಿಗೆ ಮೃತದೇಹ ತಂದಿರುವುದು ಅವ್ಯವಸ್ಥೆಯನ್ನು ತೋರಿಸುತ್ತದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಆಡಳಿತ ಹಳಿ ತಪ್ಪುತ್ತಿದೆ. ದೂರು ಬಂದ ಕೂಡಲೇ ಪ್ರತಿಕ್ರಿಯಿಸದಿದ್ದರೆ ಮತ್ತಷ್ಟು ಪ್ರಾಣಿ ಸಂಘರ್ಷ ಹೆಚ್ಚಲಿದೆ. ಈ ಬಗ್ಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ಎಂದರು.