ADVERTISEMENT

ಸರಗೂರು | ಹುಲಿ ದಾಳಿ: ಆಕ್ರೋಶಕ್ಕೆ ಮಣಿದ ಜನಪ್ರತಿನಿಧಿಗಳು

ಕೂಡಗಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 2:48 IST
Last Updated 2 ನವೆಂಬರ್ 2025, 2:48 IST
ಸರಗೂರು ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ದೊಡ್ಡನಿಂಗಯ್ಯ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಾಸಕ ಅನಿಲ್ ಚಿಕ್ಕಮಾದು ಹಾಜರಿದ್ದರು
ಸರಗೂರು ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ದೊಡ್ಡನಿಂಗಯ್ಯ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಾಸಕ ಅನಿಲ್ ಚಿಕ್ಕಮಾದು ಹಾಜರಿದ್ದರು   

ಸರಗೂರು: ತಾಲ್ಲೂಕಿನ ಕೂಡಗಿ ಗ್ರಾಮದ ರೈತ ದೊಡ್ಡನಿಂಗಯ್ಯ ಹುಲಿ ದಾಳಿಯಿಂದ ಮೃತಪಟ್ಟ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಶನಿವಾರ, ಮೃತ ರೈತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.

‘ಕಾಡುಪ್ರಾಣಿಗಳು-ಮಾನವ ಸಂಘರ್ಷಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಹುಲಿ ಓಡಾಟದ ಬಗ್ಗೆ ದೂರು ಬಂದಿದ್ದರೂ ಬೋನು ಇಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ ಕ್ರಮ ವಹಿಸಬೇಕು. ನೊಂದ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಕಾಡುಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಬೇಕು. ರೈಲು ಕಂಬಿ ಹಾಕಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಸಭೆ ಇಂದು:

‘ಪ್ರಾಣಿಗಳ ಹಾವಳಿ ತಡೆ ಸಂಬಂಧ ನ.2ರಂದು ಅಧಿಕಾರಿಗಳು, ರೈತರ ಸಭೆಯನ್ನು ಚಾಮರಾಜನಗರದಲ್ಲಿ ಕರೆಯಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಭಾಗವಹಿಸಲಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿನ ಸಮಸ್ಯೆಗಳೇನು? ಕಂದಾಯ– ಅರಣ್ಯ ಇಲಾಖೆ ನಡುವಿನ ವ್ಯತ್ಯಾಸ, ಅಕ್ರಮ ರೆಸಾರ್ಟ್‌ಗಳಿಂದ ಆಗುವ ಅನಾನುಕೂಲಗಳೇನು? ಸಫಾರಿಗೆ ಕಡಿವಾಣ ಹಾಕಬೇಕೆ ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಸಂಸದ ಸುನೀಲ್ ಬೋಸ್, ಶಾಸಕ ಅನಿಲ್ ಚಿಕ್ಕಮಾದು ಅವರೂ ದೊಡ್ಡನಿಂಗಯ್ಯ ಮೃತದೇಹದ ದರ್ಶನ ಪಡೆದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಸಂಸದ ಸುನೀಲ್ ಬೋಸ್ ಮಾತನಾಡಿ, ‘ದೊಡ್ಡನಿಂಗಯ್ಯ ಅವರ ಮೇಲೆ ಹುಲಿ ದಾಳಿ ನಡೆಸಿದಂತಹ ಘಟನೆ ಮರುಕಳಿಸದಂತೆ ಇಲಾಖೆ ಕ್ರಮ ವಹಿಸಬೇಕು. ಕುಟುಂಬದ ಸದಸ್ಯರಲ್ಲಿ ಇಬ್ಬರಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಬೇಕು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಕಾಡಂಚಿನ ಗ್ರಾಮಗಳ ರೈತರು ಘಟನಾ ಸ್ಥಳದ ಸಮೀಪದ ಹೋಗಬಾರದು. ತಾಲ್ಲೂಕಿನಲ್ಲಿ ಮೂರು ಘಟನೆ ನಡೆದಿದೆ. ಇದಕ್ಕೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಯಾಗಬೇಕು. ಹಿರಿಯ ಅಧಿಕಾರಿಗಳು ಆದೇಶ ನೀಡಿದರೆ ಕಿರಿಯ ಅಧಿಕಾರಿಗಳು ತಪ್ಪದೇ ಕೆಲಸ ಮಾಡಬೇಕು. ಅರಣ್ಯದಲ್ಲಿ ಗಸ್ತು ಮಾಡಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಹುಲಿ ಸೆರೆ ಹಿಡಿಯಬೇಕು’ ಎಂದರು.

ದೊಡ್ಡನಿಂಗಯ್ಯ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ರಾಕೇಶ್‌ಕುಮಾರ್, ಎಸ್‌ಪಿ ಎನ್. ವಿಷ್ಣುವರ್ಧನ, ಡಿಸಿಎಫ್ ಕೆ.ಪರಮೇಶ್, ತಹಶೀಲ್ದಾರ್ ಮೋಹನಕುಮಾರಿ, ಇಒ ಪ್ರೇಮ್‌ಕುಮಾರ್, ಸಿಪಿಐ ಪ್ರಸನ್ನಕುಮಾರ್, ಪಿಎಸ್‌ಐ ಕಿರಣ್, ಆರ್‌ಎಫ್‌ಒ ಅಮೃತಾ, ದಸಂಸ ಮುಖಂಡ ಬೆಟ್ಟಯ್ಯಕೋಟೆ, ಕೋಟೆ ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಣ್ಮೀ ನಿಂಗರಾಜು, ಶಿವಶಂಕರ್, ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ, ಮಾಜಿ ಅಧ್ಯಕ್ಷ ಶಿವಣ್ಣ, ಕುರ್ಣೇಗಾಲ ಬೆಟ್ಟಸ್ವಾಮಿ, ಕೂಡಿಗಿ ಗೋವಿಂದರಾಜು ಹಾಜರಿದ್ದರು.

‘ಸರಗೂರು ತಾಲ್ಲೂಕಿನ ಮಳಿಯೂರು, ಬೆಂಡಿಗೆರೆಯಲ್ಲಿ ಅರಣ್ಯ ಅಧಿಕಾರಿಗಳು ಶನಿವಾರವೂ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿಯಿತು. ಹುಲಿ ದಾಳಿ ನಡೆದ ಕೂಡಿಗೆ ಬಳಿ ಕಾಡಿನೊಳಗೆ ಘರ್ಜನೆ ಕೇಳಿಸಿದೆ ಎಂದು ರೈತರು ತಿಳಿಸಿದ್ದು, ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ

ಅರಣ್ಯಾಧಿಕಾರಿಗಳು ಕೆಲಸದ ಬದಲಿಗೆ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ. ರೈತ ಸಂಪರ್ಕ ಸಭೆ ಮಾಡಿಲ್ಲ. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ
ಅನಿಲ್ ಚಿಕ್ಕಮಾದು ಶಾಸಕ

₹ 20 ಲಕ್ಷ ಚೆಕ್ ವಿತರಣೆ

ಗ್ರಾಮಸ್ಥರು ಶುಕ್ರವಾರ ತಡರಾತ್ರಿಯವರೆಗೂ ನಿಂಗಯ್ಯ ಮೃತದೇಹವನ್ನು ಜಮೀನಿನಲ್ಲಿಟ್ಟು ಪ್ರತಿಭಟಿಸಿದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಶಾಸಕರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅನಿಲ್ ಚಿಕ್ಕಮಾದು ದೊಡ್ಡನಿಂಗಯ್ಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ₹ 20 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಕುಟುಂಬ ಸದಸ್ಯರೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಲಾಗುವುದು ಎಂದು ಭರವಸೆ ನೀಡಿದರು. ಆರ್‌ಎಫ್‌ಒ ಸ್ಥಳಕ್ಕೆ ಆಗಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅವರ ಮನವೊಲಿಸಿದ ಅನಿಲ್‌ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ತಿಳಿಸಿದರು. ಕಾರ್ಯಾಚರಣೆ ಮುಂದುವರಿಕೆ  ‘ಸರಗೂರು ತಾಲ್ಲೂಕಿನ ಮಳಿಯೂರು ಬೆಂಡಿಗೆರೆಯಲ್ಲಿ ಅರಣ್ಯ ಅಧಿಕಾರಿಗಳು ಶನಿವಾರವೂ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿಯಿತು. ಹುಲಿ ದಾಳಿ ನಡೆದ ಕೂಡಿಗೆ ಬಳಿ ಕಾಡಿನೊಳಗೆ ಘರ್ಜನೆ ಕೇಳಿಸಿದೆ ಎಂದು ರೈತರು ತಿಳಿಸಿದ್ದು ಡ್ರೋನ್‌ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ತಪ್ಪಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ಮಹದೇವಪ್ಪ

ಮೈಸೂರು: ‘ ಹುಲಿ ದಾಳಿ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಗಮನಕ್ಕೆ ಬಂದಿದ್ದು ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವರದಿಗೆ ಸೂಚಿಸಿದ್ದು ಅದನ್ನು ಆಧರಿಸಿ ಇನ್ನಷ್ಟು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಎಚ್ಚರಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಜಿಲ್ಲೆಯಲ್ಲಿ ಈಚೆಗೆ ಹುಲಿ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಚ್‌.ಡಿ. ಕೋಟೆಯಲ್ಲಿ ಸದ್ಯ ದಾಳಿ ನಡೆದಿರುವ ಭಾಗದಲ್ಲಿ ಆರರಿಂದ ಎಂಟು ಹುಲಿಗಳು ಕಾಡಿನಿಂದ ಹೊರಬಂದಿವೆ. ಇವುಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶಿಸಿದೆ. ಅದಕ್ಕಾಗಿ ನಾಲ್ಕು ಕಡೆಗಳಲ್ಲಿ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದೆ. ಪರಿಶೀಲನೆ ವೇಳೆ ಅಧಿಕಾರಿಗಳು ಸ್ಥಳಕ್ಕೆ ಸಕಾಲಕ್ಕೆ ಧಾವಿಸದೇ ಇರುವುದು. ಗ್ರಾಮಸ್ಥರು ಕೇಳಿಕೊಂಡರೂ ಬೋನ್‌ ಇಡದಿರುವುದು ಕಂಡುಬಂದಿದೆ. ಹೀಗಾಗಿ ಒಬ್ಬರನ್ನು ಅಮಾನತುಗೊಳಿಸಲಾಗಿದೆ’ ಎಂದರು. ಚಾ.ನಗರದಲ್ಲಿ ವಿಶೇಷ ಸಭೆ : ಆಂಬುಲೆನ್ಸ್‌ ವ್ಯವಸ್ಥೆ ಇಲ್ಲದಿರುವುದು ಸಫಾರಿಯಿಂದ ಪ್ರಾಣಿಗಳಿಗೆ ಆಗುತ್ತಿರುವ ಕಿರಿಕಿರಿ ರೆಸಾರ್ಟ್‌ಗಳು ಹೆಚ್ಚಾಗಿರುವುದು ಪರಿಶೀಲನೆಯಲ್ಲಿ ತಿಳಿದು ಬಂದಿದೆ. ಈ ಎಲ್ಲಾ ವಿಷಯವನ್ನು ಗುರುವಾರ ಡೆದ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದಿದ್ದೇನೆ. ಅರಣ್ಯ ಸಚಿವರು ಅರಣ್ಯ ಅಧಿಕಾರಿಗಳು ಇನ್ನಿತರ ಜನಪ್ರತಿ ನಿಧಿಗಳನ್ನು ಒಳಗೊಂಡಂತೆ ಹುಲಿ ದಾಳಿ ಕುರಿತು ಚರ್ಚಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ವಿಶೇಷ ಸಭೆ ಕರೆಯಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.