ADVERTISEMENT

ಸರಗೂರು | ಹುಲಿ ದಾಳಿ: ಮೂರು ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:46 IST
Last Updated 7 ಅಕ್ಟೋಬರ್ 2025, 4:46 IST
ಸರಗೂರು ತಾಲ್ಲೂಕಿನ ಜಯಲಕ್ಷೀಪುರ ಗ್ರಾಮದ ಕೃಷ್ಣಭೋವಿ ಅವರ ಜಮೀನಿನಲ್ಲಿ ಸೋಮವಾರ ಹುಲಿ ದಾಳಿ ನಡೆಸಿ ಮೇಕೆಗಳನ್ನು ಕೊಂದು ಹಾಕಿರುವುದು
ಸರಗೂರು ತಾಲ್ಲೂಕಿನ ಜಯಲಕ್ಷೀಪುರ ಗ್ರಾಮದ ಕೃಷ್ಣಭೋವಿ ಅವರ ಜಮೀನಿನಲ್ಲಿ ಸೋಮವಾರ ಹುಲಿ ದಾಳಿ ನಡೆಸಿ ಮೇಕೆಗಳನ್ನು ಕೊಂದು ಹಾಕಿರುವುದು   

ಸರಗೂರು: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಅರಣ್ಯ ವಲಯ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದಲ್ಲಿ ಸೋಮವಾರ ಹುಲಿ ದಾಳಿ ನಡೆಸಿ ಮೂರು ಮೇಕೆಗಳನ್ನು ಕೊಂದು ಹಾಕಿದೆ.

ಜಯಲಕ್ಷೀಪುರ ಗ್ರಾಮದ ಕೃಷ್ಣಭೋವಿ ಅವರಿಗೆ ಸೇರಿದ ಮೇಕೆಗಳು ಇವುಗಳಾಗಿದ್ದು, ಮೇಕೆಗಳನ್ನು ಮೇಯಿಸಲು ಹೋದಾಗ ಜಮೀನಲ್ಲಿ ಅಡಗಿ ಕುಳಿತಿದ್ದ ಹುಲಿ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿ ಮೂರು ಮೇಕೆಗಳನ್ನು ಕೊಂದು ಅದರಲ್ಲಿ ಒಂದು ಮೇಕೆಯನ್ನು ಹೊತ್ತೊಯ್ದಿದೆ. ಮೇಕೆ ಸಾಕಾಣಿಕೆಯನ್ನೆ ನಂಬಿ ಜೀವನ ನಡೆಸುತ್ತಿರುವ ಕೃಷ್ಣಭೊವಿ ಅವರಿಗೆ ನಷ್ಟ ಆಗಿದೆ.

 ‘ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ಮುಖಂಡ ವೆಂಕಟರಾಮು ಅವರು ದೂರಿದ್ದಾರೆ.

ADVERTISEMENT

‘ಘಟನೆ ನಡೆದು ಹಲವು ಗಂಟೆಗಳಾದರೂ ಸ್ಥಳಕ್ಕೆ ಬಾರದೇ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ. ಈ ಹುಲಿ ಕಳೆದ ತಿಂಗಳು ಜಾನುವಾರು ಹಾಗೂ ಜನರ ಮೇಲೆ ದಾಳಿ ಮಾಡಿದೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಾರೆ. ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಬೋನು ಇಡದೇ ಜನರ ಜೊತೆ ಆಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಗ್ರಹಿಸಿದರು.

‘ಹುಲಿ ದಾಳಿಗೆ ಜಾನುವಾರು ಬಲಿಯಾದ ಬಗ್ಗೆ ಅರ್ಜಿ ನೀಡಿದರೂ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾಡಾನೆಗಳು ಜಮೀನಲ್ಲಿ ಬೆಳೆದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದ್ದರೂ ರೈಲು ಕಂಬಿಗಳು ಅಳವಡಿಸಲು ಹಿಂದೇಟು ಹಾಕುತ್ತಿದ್ದಾರೆ’ ದೂರಿದರು.

‘ಮೇಕೆ ಕಳೆದುಕೊಂಡಿರುವ ಕೃಷ್ಣಭೋವಿ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಅರಣ್ಯ ಇಲಾಖೆಗೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.