ADVERTISEMENT

ಹುಲಿಗಳ ದಾಳಿ: ಸಫಾರಿ ಟ್ರಿಪ್‌ ಹೆಚ್ಚಳ, ರೆಸಾರ್ಟ್‌ ಕಾರಣವಲ್ಲ; ಯದುವೀರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:26 IST
Last Updated 5 ನವೆಂಬರ್ 2025, 7:26 IST
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್   

ಮೈಸೂರು: ‘ಕಾಡಂಚಿನಲ್ಲಿ ಹುಲಿಗಳ ದಾಳಿ ಜಾಸ್ತಿಯಾಗಿರುವುದಕ್ಕೆ ಸಫಾರಿ ಟ್ರಿಪ್‌ ಹೆಚ್ಚಳ ಅಥವಾ ರೆಸಾರ್ಟ್‌ ನಿರ್ಮಾಣವಾಗಿರುವುದು ಕಾರಣವಲ್ಲ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರತಿಪಾದಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ದಾಳಿ ಹೆಚ್ಚುತ್ತಿರುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಮರ್ಪಕವಾದ ರೀತಿಯಲ್ಲಿ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

‘ದತ್ತಾಂಶಗಳನ್ನು ಪರಿಶೀಲಿಸಬೇಕು. ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಎಂದು ನೋಡಬೇಕು. ಪ್ರಕೃತಿಯೇ ಪ್ರಕೃತಿಯನ್ನು ಕಾಪಾಡಿಕೊಳ್ಳುತ್ತದೆ.

ADVERTISEMENT

ಕಾಡಂಚಿನಲ್ಲಿ ಮನುಷ್ಯನ ಅತಿಯಾದ ಹಸ್ತಕ್ಷೇಪ ತಪ್ಪಬೇಕು. ಮನುಷ್ಯ ಪ್ರಕೃತಿಗೆ ಕೈ ಹಾಕುವುದು ಬೇಡ’ ಎಂದು ಪ್ರತಿಕ್ರಿಯಿಸಿದರು.

‘ಇತ್ತೀಚೆಗೆ ಹುಲಿಗಳ ಸಂಖ್ಯೆ ಹೆಚ್ಚಾಗಿದೆ‌. ಹಾಗಾಗಿ ಅವು ಕಾಡಿನಿಂದ ಹೊರಬರುತ್ತಿವೆ. ಇದನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಒಳ್ಳೆಯ ಯೋಜನೆ ರೂಪಿಸಬೇಕು. ಜನರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರೆಸಾರ್ಟ್‌ಗಳಿಂದ, ಸಫಾರಿ ಸಮಯ (ಟ್ರಿಪ್‌) ಹೆಚ್ಚಳದಿಂದ ಹುಲಿಗಳ ದಾಳಿ ಹೆಚ್ಚುತ್ತಿಲ್ಲ. ಈ ಬಗ್ಗೆ ಸಮಗ್ರ ಅಧ್ಯಯನ ಆಗಬೇಕು. ಅರಣ್ಯದಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದೆ. ಈ ಪರಿಣಾಮ ಜಿಂಕೆ, ಸಾರಂಗ ಮೊದಲಾದ ಸಸ್ಯಾಹಾರಿ ಪ್ರಾಣಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ಹೊರಬರುತ್ತಿವೆ. ಹಾಗಾಗಿ ಅವುಗಳನ್ನು ಬೇಟೆಯಾಡಲು ಹುಲಿಗಳೂ ಕಾಡಿನಿಂದ ಹೊರಬರುತ್ತಿವೆ’ ಎಂದರು.