ADVERTISEMENT

ಸರಗೂರು ತಾಲ್ಲೂಕಿನಲ್ಲಿ ಹುಲಿ ಸೆರೆ

ನಿಟ್ಟುಸಿರುಬಿಟ್ಟ ಗ್ರಾಮಸ್ಥರು; ಫಲ ನೀಡಿದ ಸತತ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:31 IST
Last Updated 8 ಸೆಪ್ಟೆಂಬರ್ 2020, 16:31 IST
ಸರಗೂರು ತಾಲ್ಲೂಕಿನ ದೇವಲಾಪುರದಲ್ಲಿ ಮಂಗಳವಾರ ಸೆರೆಹಿಡಿಯಲಾದ ಹುಲಿ
ಸರಗೂರು ತಾಲ್ಲೂಕಿನ ದೇವಲಾಪುರದಲ್ಲಿ ಮಂಗಳವಾರ ಸೆರೆಹಿಡಿಯಲಾದ ಹುಲಿ   

ಸರಗೂರು (ಮೈಸೂರು ಜಿಲ್ಲೆ): ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿದ್ದ, ಅಂದಾಜು 11 ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿದ್ದಾರೆ.

ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಸೇರಿದ ಗುಂಡ್ರೆ ಹಾಗೂ ಎನ್‌.ಬೇಗೂರು ವಲಯದಿಂದ, ಜುಲೈನಲ್ಲೇ ಹೊರಬಂದಿದ್ದ ಈ ಹುಲಿಯು ಮೂರ್‌ಬಂದ್, ಹೆಗ್ಗನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿತ್ತು. ಇದರ ಸೆರೆಗೆ ಅರಣ್ಯ ಇಲಾಖೆಯು ಕೃಷ್ಣ, ಮಹೇಂದ್ರ, ಜಯಪ್ರಕಾಶ, ಗಣೇಶ ಹಾಗೂ ಪಾರ್ಥಸಾರಥಿ ಎಂಬ ಆನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿತ್ತು.

‌ಮಂಗಳವಾರ ಮಧ್ಯಾಹ್ನ, ಹುಲಿಯು ಕಣ್ಣಿಗೆ ಬೀಳುತ್ತಿದ್ದಂತೆಯೇ ಪಶುವೈದ್ಯ ಡಾ.ನಾಗರಾಜ್ ಹಾಗೂ ಇತರ ಸಿಬ್ಬಂದಿ ಯಶಸ್ವಿಯಾಗಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ.ನಾಗರಾಜ್, ‘ಹುಲಿಯು ಆರೋಗ್ಯವಾಗಿದೆ. ಆದರೆ, ವಯಸ್ಸಾಗಿರುವುದರಿಂದ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿದೆ’ ಎಂದು ತಿಳಿಸಿದರು.

ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಟಿ.ಬಾಲಚಂದ್ರ ಪ್ರತಿಕ್ರಿಯಿಸಿ, ‘ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ 80ಕ್ಕೂ ಅಧಿಕ ಸಿಬ್ಬಂದಿ ಹಾಗೂ 5 ಆನೆಗಳ ನೆರವಿನಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಬನ್ನೇರುಘಟ್ಟದ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ’ ಎಂದು ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ರವಿಕುಮಾರ್, ಪಶುವೈದ್ಯಾಧಿಕಾರಿ ನಾಗರಾಜು, ವಲಯ ಅರಣ್ಯಧಿಕಾರಿಗಳಾದ ಚೇತನ್, ಶಶಿಧರ್, ಮಹದೇವ್, ಮಂಜುನಾಥ್, ಪುಟ್ಟರಾಜು, ಷಣ್ಮುಗ, ಎಸ್‌ಟಿಪಿಎಫ್‌ಮ ಆರ್‌ಎಫ್‌ಒ ಸಿದ್ದರಾಜು, ಡಿಆರ್‌ಎಫ್‌ಒ ಅನಿಲ್ ಕುಮಾರ್, ರಾಮಾಂಜನೇಯಲು, ನವೀನ್ ಕುಮಾರ್, ಶಿವನೇಗೌಡ, ರಾಜೀವ್, ಆಂಥೋನಿ, ಪಶುವೈದ್ಯ ಸಹಾಯಕ ಅಕ್ರಂ ಪಾಷ, ಅರಣ್ಯ ರಕ್ಷಕ ಟಿ.ಆರ್.ರಂಜಿತ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.