
ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವನ್ಯಜೀವಿ ವಲಯಕ್ಕೆ ಸೇರಿದ, ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಹೆಣ್ಣು ಹುಲಿ ಹಾಗೂ ಅದರ ಮೂರು ಮರಿಗಳನ್ನು ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆ ವೇಳೆ ಮಂಗಳವಾರ ಸೆರೆ ಹಿಡಿದಿದೆ.
6–7 ವರ್ಷದ ಹೆಣ್ಣು ಹುಲಿ ಹಾಗೂ 3 ತಿಂಗಳ ಎರಡು ಹೆಣ್ಣು ಮತ್ತು ಒಂದು ಗಂಡು ಹುಲಿಮರಿಗಳು ಸೆರೆ ಸಿಕ್ಕಿವೆ. ಇದೇ ಸ್ಥಳದಲ್ಲಿ ಅಕ್ಟೋಬರ್ 31ರಂದು ಸಿಕ್ಕಿದ ಎರಡು ಹೆಣ್ಣು ಹುಲಿಮರಿಗಳನ್ನು ಬೆಂಗಳೂರಿನ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿತ್ತು.
‘ಈ ಎಲ್ಲ ಮರಿಗಳನ್ನು ತಾಯಿ ಹುಲಿಯೊಂದಿಗೆ ಮತ್ತೆ ಕಾಡಿಗೆ ಬಿಡಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಹುಲಿ ಉಪಟಳ ಹೆಚ್ಚಾದ ಕಾರಣ 20 ದಿನದಿಂದ ಅಧಿಕಾರಿಗಳು ಸಾಕಾನೆಗಳಾದ ಭೀಮ, ಮಹೇಂದ್ರ, ಸುಗ್ರೀವ, ಪ್ರಶಾಂತನನ್ನು ಬಳಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು.
ಅರಿವಳಿಕೆ ಚುಚ್ಚುಮದ್ದು ತಜ್ಞ ಡಾ.ವಾಸೀಮ್ ಮಿರ್ಜಾ, ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ನುಗು ಅರ್‌ಎಫ್‌ಒ ಎಚ್.ಬಿ.ಅನಿತ್‌ರಾಜ್, ಕಲ್ಕೆರೆ ಆರ್‌ಎಫ್‌ಒ ರಾಜೇಶ್ ಸೇರಿದಂತೆ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಅಧಿಕಾರಿಗಳು–ಸಿಬ್ಬಂದಿ, ಎಸ್‌ಟಿಪಿಎಫ್, ಎಲ್‌ಟಿಎಫ್, ಇಟಿಎಫ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.