ADVERTISEMENT

‘ಅಭಿವೃದ್ಧಿಗಾಗಿ ಸಕಾಲದಲ್ಲಿ ಕರ ಪಾವತಿಸಿ’

ಅಧಿಕಾರ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ ನಾಗರಿಕರಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:03 IST
Last Updated 12 ನವೆಂಬರ್ 2020, 6:03 IST
ಕೆ.ಆರ್.ನಗರ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೆ.ಜಿ.ಸುಬ್ರಹ್ಮಣ್ಯ ಅವರು ಮುಖ್ಯಾಧಿಕಾರಿ ಕೆ.ಶಿವಣ್ಣ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷೆ ಎಂ.ಎಸ್.ಸೌಮ್ಯಾ ಸೇರಿದಂತೆ ಇತರರು ಇದ್ದಾರೆ
ಕೆ.ಆರ್.ನಗರ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೆ.ಜಿ.ಸುಬ್ರಹ್ಮಣ್ಯ ಅವರು ಮುಖ್ಯಾಧಿಕಾರಿ ಕೆ.ಶಿವಣ್ಣ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷೆ ಎಂ.ಎಸ್.ಸೌಮ್ಯಾ ಸೇರಿದಂತೆ ಇತರರು ಇದ್ದಾರೆ   

ಕೆ.ಆರ್.ನಗರ: ‘ಸಾರ್ವಜನಿಕರು ಮನೆ, ನಿವೇಶನ ಮತ್ತು ನೀರಿನ ಕಂದಾಯವನ್ನು ಸಕಾಲದಲ್ಲಿ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ ಹೇಳಿದರು.

ಪುರಸಭೆ ನೂತನ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪುರಸಭೆಗೆ ಬರುವ ಆದಾಯ ನಿಂತು ಹೋಗಿದೆ. ಪಟ್ಟಣದ ಕೆಲ ನಿವಾಸಿಗಳು ಸಕಾಲದಲ್ಲಿ ಮನೆ, ನಿವೇಶನ ಮತ್ತು ನೀರಿನ ಕಂದಾಯ ಪಾವತಿಸುತ್ತಿಲ್ಲ, ಪುರಸಭೆ ವಾಣಿಜ್ಯ ಮಳಿಗೆ ಬಾಡಿಗೆ ಪಡೆದ ಕೆಲವರು ಸಕಾಲದಲ್ಲಿ ಬಾಡಿಗೆಯೂ ಪಾವತಿಸುತ್ತಿಲ್ಲ. ಇದರಿಂದ ಪುರಸಭೆ ಕೆಲ ನೌಕರರಿಗೆ 3-4 ತಿಂಗಳಿಂದ ವೇತನವೇ ನೀಡಲಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪುರಸಭೆ ಮುಖ್ಯಾಧಿಕಾರಿಗಳಿಂದ ಹಣಕಾಸು ಲೆಕ್ಕ ಪಡೆಯಲಾಗಿದೆ. ಶೇ 16ರಷ್ಟು ಮಾತ್ರ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಯಾಗಿದೆ. ಕೊರೊನಾ ಸಂಕಷ್ಟದಿಂದ ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದಲೂ ಅನುದಾನ ಬಂದಿರುವುದಿಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರದ ಅನುದಾನ, ಮನೆ, ನಿವೇಶನ, ನೀರಿನ ಕಂದಾಯ, ವಾಣಿಜ್ಯ ಮಳಿಗೆಗಳ ಬಾಡಿಗೆ ಹೀಗೆ ಎಲ್ಲವೂ ಕ್ರೋಡೀಕರಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ’ ಹೇಳಿದರು.

ADVERTISEMENT

‘ಮಳೆ ನೀರಿನಿಂದ ಪಟ್ಟಣದ ವಿದ್ಯಾನಗರ ಸೇರಿದಂತೆ ಕೆಲ ಹೊಸ ಬಡಾವಣೆಗಳಲ್ಲಿನ ಮಣ್ಣಿನ ರಸ್ತೆ ಕೊಚ್ಚಿ ಹೋಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದು ನಿಜ, ಸದ್ಯಕ್ಕೆ ಡಾಂಬರ್ ರಸ್ತೆ ಮಾಡಲು ಸಾಧ್ಯವಿಲ್ಲದೇ ಹೋದರು ಗುಂಡಿಗಳು ಮುಚ್ಚಿಸುವ ಕೆಲಸ ಮಾಡಲಾಗುವುದು’ ಎಂದರು.

‘ಪಟ್ಟಣದ ಕೆಲ ಕಡೆ ಒಳಚರಂಡಿ ಗುಂಡಿಗಳು ಬಾಯಿ ತೆರೆದಿದ್ದುಎಂಜಿನಿಯರ್‌ಗಳು ಖುದ್ದು ಪರಿಶೀಲನೆ ಮಾಡಿದ್ದಾರೆ. ಅವುಗಳ ದುರಸ್ತಿ ಕೆಲಸವೂ ಮಾಡಲಾಗುತ್ತದೆ, ತುರ್ತು ಸಭೆ ಕರೆದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. ಪಟ್ಟಣದ ಗಡಿಯಲ್ಲಿ, ಹುಣಸೂರು ರಸ್ತೆಗೆ ಸ್ವಾಗತ ಕಮಾನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.