ತಿ.ನರಸೀಪುರ: ಕುಂಭಮೇಳ ಆರಂಭ– ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸ್ವಾಮಿಗಳು
ತಿ.ನರಸೀಪುರ (ಮೈಸೂರು ಜಿಲ್ಲೆ): ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸೋಮವಾರ ಆರಂಭವಾದ ಕುಂಭಮೇಳಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ನದಿ ಸಂಗಮದಲ್ಲಿ ಮಿಂದೆದ್ದ ಭಕ್ತರು, ಅಗಸ್ತ್ಯೇಶ್ವರ ದೇಗುಲ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಗುಂಜಾನರಸಿಂಹ ಸ್ವಾಮಿ, ಚೌಡೇಶ್ವರಿ, ಹನುಮಂತ ದೇಗುಲಗಳಲ್ಲಿ ಕೈ ಮುಗಿದರು.
ಸೋಮವಾರ ಬೆಳಿಗ್ಗೆ 9ಕ್ಕೆ ಅಗಸ್ತ್ಯೇಶ್ವರ ಸ್ವಾಮಿ ದೇಗುಲದಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿತು.
ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಜಯೇಂದ್ರಪುರಿ ಸ್ವಾಮೀಜಿ, ತಿರುಚ್ಚಿಯ ಶ್ರೀಬುದ್ಧ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಪುಣ್ಯಸ್ನಾನ ಮಾಡಿದರು.
ನಂತರ ನಡುಹೊಳೆ ಬಸಪ್ಪನ ಸನ್ನಿಧಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು.
ದಕ್ಷಿಣ ಪ್ರಯಾಗ ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲಿನಲ್ಲಿ ನಡೆಯುತ್ತಿರುವ 13ನೇ ಕುಂಭಮೇಳ ಇದಾಗಿದ್ದು, ಪವಿತ್ರ ಕುಂಭಸ್ನಾನ ಫೆ.12ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.