ADVERTISEMENT

ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

ಬೆಂಕಿಯ ಕೆನ್ನಾಲಗೆಯಲ್ಲಿ ಹಾದು ಹೋದ ಅಲಂಕೃತ ಎತ್ತು, ಹಸು, ಕರುಗಳು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:10 IST
Last Updated 16 ಜನವರಿ 2026, 5:10 IST
ತಿ.ನರಸೀಪುರ ಪಟ್ಟಣದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು
ತಿ.ನರಸೀಪುರ ಪಟ್ಟಣದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು   

ತಿ.ನರಸೀಪುರ: ಸೂರ್ಯ ತನ್ನ ಪಥ ಬದಲಿಸುವ ಸಂಭ್ರಮದ ಮಕರ ಸಂಕ್ರಾಂತಿಯ ಶುಭದಿನದಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ರೈತರು ರಾಸುಗಳನ್ನು ಗುರುವಾರ ಕಿಚ್ಚಾಯಿಸಿದರು.

ಸಂಕ್ರಾಂತಿ ಸಂಭ್ರಮ ಪಟ್ಟಣದ ಜನತೆಯಲ್ಲಿ ಮನೆ ಮಾಡಿತ್ತು. ಪ್ರತಿ ವರ್ಷ ಸಂಕ್ರಾಂತಿ ದಿನ ಪಟ್ಟಣದ ರೈತರು ಲಿಂಕ್ ರಸ್ತೆಯಲ್ಲಿ ಹುಲ್ಲಿನ ಹಾಸಿಗೆ ರಸ್ತೆಗೆ ಅಡ್ಡಲಾಗಿ ಹಾಸಿದ ಬಳಿದ ಮುಖಂಡರು ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡುವುದು ವಾಡಿಕೆ. ಅದರಂತೆ ಸಂಜೆ 4 ಗಂಟೆಯ ಬಳಿಕ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಿ ರಾಸುಗಳ ಕಿಚ್ಚು ಹಾಯಿಸುವಿಕೆಗೆ ಚಾಲನೆ ನೀಡಲಾಯಿತು.

ಕಿಚ್ಚು ಹಾಯಲು ಸಿದ್ಧವಾಗಿರುವ ಅಲಂಕೃತ ಎತ್ತುಗಳು, ಹಸುಗಳು, ಕರುಗಳು ಹಾಗೂ ಮೇಕೆ - ಕುರಿಗಳು ಬೆಂಕಿಯ ಕೆನ್ನಾಲಗೆಯಲ್ಲಿ ಹಾದು ಹೋದವು.

ADVERTISEMENT

ಇದಕ್ಕೂ ಮುನ್ನಾ ರೈತರು ತಮ್ಮ ಹಸುಗಳ ಕೊಂಬುಗಳಿಗೆ ಬಣ್ಣ ಹಚ್ಚಿ‌ ಹೂಗಳಿಂದ ಸಿಂಗರಿಸಿ, ಅವುಗಳ ಮೈ ಮೇಲೆ‌ ಅರಿಸಿನ ಹಚ್ಚಿ ಸಿಂಗರಿಸಿ ಮೆರವಣಿಗೆಯ ಮೂಲಕ‌ ಕಿಚಾಯಿಸುವ ಸ್ಥಳಕ್ಕೆ ತಂದರು. ರಾಸುಗಳ ಕಿಚ್ಚಾಯಿಸುವುದನ್ನು‌ ನೋಡಲು ಖಾಸಗಿ ಬಸ್ ನಿಲ್ದಾಣ ಹಾಗೂ ಲಿಂಕ್ ರಸ್ತೆಯ ಇಕ್ಕೆಲಗಳಲ್ಲಿ ಜನಸಂದಣಿ ತುಂಬಿತ್ತು.

ಗೋ ಪೂಜೆ: ಇತ್ತ ಮನೆಗಳಲ್ಲಿ ಗೃಹಿಣಿಯರು ಗೋವುಗಳಿಗೆ ಪೂಜೆ ಸಲ್ಲಿಸಿ‌ ಸಿಹಿ‌ ಪೊಂಗಲು ನೀಡಲಾಯಿತು.

ಶುಭಾಶಯ ವಿನಿಮಯ: ಹೆಣ್ಣು ಮಕ್ಕಳು ಹಾಗೂ ಗೃಹಿಣಿಯರು ನೆರೆ ಹೊರೆಯ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ನೀಡಿ ಪರಸ್ಪರ ಶುಭಾಶಯ ವಿನಿಮಿಯ ಮಾಡಿಕೊಂಡರು.

ಎಳ್ಳು ಬೆಲ್ಲ ನೀಡಿ ಪರಸ್ಪರ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡ ಹೆಣ್ಣುಮಕ್ಕಳು

ದೇವರಿಗೆ ವಿಶೇಷ ಅಲಂಕಾರ

ವರ್ಷದ ಮೊದಲ‌ ಹಬ್ಬ ಮಕರ ಸಂಕ್ರಮಣದ ಅಂಗವಾಗಿ ಪಟ್ಟಣದ ಶಿವಾಲಯ ವಿಷ್ಣು ದೇವಾಲಯ  ಅಯ್ಯಪ್ಪ ಸ್ವಾಮಿಬಳ್ಳೇಶ್ವರ ಸ್ವಾಮಿ ರಾಯರ ಬೃಂದಾವನ ದೇಗುಲಗಳು ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ನಡೆದವು. ಬೆಳಗಿನಿಂದಲೇ ದೇವರಿಗೆ ಅಲಂಕಾರ ಅಭಿಷೇಕ ಮತ್ತಿತರ ಸಾಂಪ್ರದಾಯಿಕ ಪೂಜೆಗಳನ್ನು‌ ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.