ADVERTISEMENT

ತಣಿಯದ ಅನ್ನದಾತರ ಆಕ್ರೋಶ

2ನೇ ದಿನವೂ ಆರ್‌ಸಿಇಪಿ ವಿರುದ್ಧ ಪ್ರತಿಭಟನೆ ನಡೆಸಿದ ರೈತರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:29 IST
Last Updated 25 ಅಕ್ಟೋಬರ್ 2019, 13:29 IST
ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಮಹಾ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮೈಸೂರಿನ ರಿಂಗ್‌ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು
ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಮಹಾ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮೈಸೂರಿನ ರಿಂಗ್‌ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು   

ಮೈಸೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ವಿರುದ್ಧ ನಗರದಲ್ಲಿ 2ನೇ ದಿನವೂ ರೈತರು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಉಭಯಬಣಗಳ ನೇತೃತ್ವದಲ್ಲಿ ರೈತರು ಪ್ರತ್ಯೇಕವಾಗಿ ಗುರುವಾರ ಪ್ರತಿಭಟನೆ ನಡೆಸಿದರೆ, ಶುಕ್ರವಾರ ರಾಷ್ಟ್ರೀಯ ಕಿಸಾನ್ ಮಹಾಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮೈಸೂರು–ನಂಜನಗೂಡು ರಸ್ತೆಯ ರಿಂಗ್‌ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ದಟ್ಟಣೆ ಉಂಟಾದ್ದರಿಂದ ಪೊಲೀಸರು ರೈತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.ಕೃಷಿ ಕ್ಷೇತ್ರಕ್ಕೆ ಈ ಒಪ್ಪಂದವು ಮಾರಕವಾಗಿದೆ. ನವೆಂಬರ್ 4ರಂದು ಒಪ್ಪಂದಕ್ಕೆ ಸಹಿ ಹಾಕಲು ಭಾರತ ತುದಿಗಾಲಿನಲ್ಲಿ ನಿಂತಿದೆ. ಒಂದು ವೇಳೆ ಸಹಿ ಹಾಕಿದರೆ ರೈತರು ಬೀದಿ ಪಾಲಾಗುತ್ತಾರೆ ಎಂದು ರೈತರು ಕಿಡಿಕಾರಿದರು.

ADVERTISEMENT

ಒಪ್ಪಂದ ಜಾರಿಯಾದರೆ ಹಾಲಿನ ದರ ಕಡಿಮೆಯಾಗುತ್ತದೆ. ಸ್ಥಳೀಯ ಮಾರುಕಟ್ಟೆಗಳು ನಾಶವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.ಬಿತ್ತನೆಬೀಜದ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರ ಪಡೆಯುತ್ತವೆ. ಬೀಜಗಳನ್ನು ಉಳಿಸಿಕೊಂಡು ಬಿತ್ತನೆ ಮಾಡುವ ಅವಕಾಶ ರೈತರ ಕೈತಪ್ಪಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದೇಶಿ ಕಂಪನಿಗಳು ಕೃಷಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ. ಸರಕು ಸೇವೆಗಳು ಸರ್ಕಾರಿ, ಸಾರ್ವಜನಿಕ ಸಂಗ್ರಹಣೆಯಲ್ಲಿ ವಿದೇಶಿ ನಿಗಮಗಳು ಭಾಗವಹಿಸುವುದರಿಂದ ಮತ್ತಷ್ಟು ಕಾರ್ಮಿಕರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ರೈತರು, ಕಾರ್ಮಿಕರು ಈ ಒಪ್ಪಂದ ವಿರೋಧಿಸಿ ಒಗ್ಗೂಡಿ ಹೋರಾಟ ನಡೆಸಬೇಕು. ಒಪ್ಪಂದ ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.