ADVERTISEMENT

ಹುಣಸೂರು | 'ದಂಡವಿಲ್ಲದೇ ವ್ಯಾಪಾರಕ್ಕೆ ಅವಕಾಶ ಕೊಡಿಸಿ'

ಸಂಸದರಿಗೆ ತಂಬಾಕು ಬೆಳೆಗಾರರ ಮನವಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:46 IST
Last Updated 10 ಅಕ್ಟೋಬರ್ 2025, 4:46 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್‌ ಅವರಿಗೆ ಬೆಳೆಗಾರರು ಬುಧವಾರ ಮನವಿ ಪತ್ರ ನೀಡಿದರು
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್‌ ಅವರಿಗೆ ಬೆಳೆಗಾರರು ಬುಧವಾರ ಮನವಿ ಪತ್ರ ನೀಡಿದರು   

ಹುಣಸೂರು: ಅನಧಿಕೃತ ತಂಬಾಕು ಬೆಳೆಗಾರರು ಮತ್ತು ಕಾರ್ಡ್‌ ಹೊಂದಿರುವ ಬೆಳೆಗಾರಿಗೆ ಮಾರುಕಟ್ಟೆಯಲ್ಲಿ ದಂಡವಿಲ್ಲದಂತೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ತಂಬಾಕು ಹಿತರಕ್ಷಣಾ ಸಮಿತಿ ಸದಸ್ಯರು ಸಂಸದರನ್ನು ಒತ್ತಾಯಿಸಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್‌ ಅವರಿಗೆ ಮನವಿ ಮಾಡಿ ಮಾತನಾಡಿದ ಕಲ್ಕುಣಿಕೆ ಬಸವರಾಜ್‌, ‘ಅನಧಿಕೃತ ಮತ್ತು ಕಾರ್ಡ್‌ದಾರರು ಅಧಿಕೃತ ಬೆಳೆಗಾರರಂತೆ ಕಷ್ಟಪಟ್ಟು ತಂಬಾಕು ಬೆಳೆಯುತ್ತಿದ್ದು, ಈ ರೈತರಿಗೂ ಅಧಿಕೃತ ಬೆಳೆಗಾರರ ಮಾದರಿಯಲ್ಲೇ ಮಾರುಕಟ್ಟೆಯಲ್ಲಿ ಬಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದರು.

ಅನಧಿಕೃತ ಬೆಳೆಗಾರರಿಗೆ ಮಂಡಳಿ ವತಿಯಿಂದ ಯಾವುದೇ ಸವಲತ್ತು ಇಲ್ಲದಿದ್ದರೂ ಬೇಸಾಯ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದು, ಈ ಬೆಳೆಗಾರರ ಮೇಲೆ ಬರೆ ಹಾಕದಂತೆ ಮಧ್ಯ ಪ್ರವೇಶಿಸಿ ದಂಡ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಲು ತಂಬಾಕು ಮಂಡಳಿ ಅಧ್ಯಕ್ಷರನ್ನು ಮನವೊಲಿಸಬೇಕು ಎಂದರು.

ADVERTISEMENT

ಮನವಿ ಸ್ವೀಕರಿಸಿದ ಸಂಸದರು, ಅನಧಿಕೃತ ಬೆಳೆಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಕಳೆದ ಸಾಲಿನಲ್ಲಿ ಈ ಸಮಸ್ಯೆ ಕುರಿತು ಮಂಡಳಿಯೊಂದಿಗೆ ಮಾತನಾಡಿ ದಂಡ ವಿಧಿಸದಂತೆ ಕ್ರಮವಹಿಸಲಾಗಿತ್ತು. ಈ ಸಾಲಿನಲ್ಲೂ ಪ್ರಯತ್ನಿಸುತ್ತೇನೆ ಎಂದರು.

‘ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣವಾಗುತ್ತಿದ್ದು, ಈ ರಸ್ತೆಯಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಲು ಅವಕಾಶವಿಲ್ಲದೆ ಸ್ಥಳಿಯ ಗ್ರಾಮದ ರೈತರು ಹೊಲ ಗದ್ದೆಗೆ ಹೋಗಲು ಸಮಸ್ಯೆ ಎದುರಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರಿಂಗ್‌ ವಿಭಾಗದ ಗಮನ ಸೆಳೆಯಬೇಕು ಎಂಬ ಮನವಿಗೆ, ಅದು ಸಾಧ್ಯವಿಲ್ಲ, ರಾಷ್ಟ್ರೀಯ ಹೆದ್ದಾರಿ ನಿಯಮಾನುಸಾರ ನಿರ್ಮಾಣವಾಗುತ್ತಿದ್ದು, ಸರ್ವಿಸ್‌ ರಸ್ತೆ ಎಲ್ಲಾ ಗ್ರಾಮಗಳಿಗೂ ನೀಡಲು ಬರುವುದಿಲ್ಲ. ಬದಲಿಗೆ ಅಂಡರ್‌ ಪಾಸ್‌ ರಸ್ತೆ ನಿರ್ಮಿಸಲಿದ್ದಾರೆ’ ಎಂದರು.

ಬನ್ನಿಕುಪ್ಪೆ ಗ್ರಾಮದ ಫ್ಲೈಓವರ್‌ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಈಗಾಗಲೇ ಎನ್.ಎಚ್.‌275 ನಿರ್ವಹಣೆಗೆ ಅನುದಾನ ರಾಜ್ಯ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಈ ಸಂಬಂಧ ಕ್ರಮವಹಿಸಬೇಕು. ಸ್ಥಳಿ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಹೇಳಿದರು.

ಸಂಸದರ ಭೇಟಿ ಸಮಯದಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ, ಗೋವಿಂದಯ್ಯ, ಉದ್ದೂರು ನಟರಾಜ್‌, ಚಂದ್ರಪ್ಪ, ಕೃಷ್ಣೇಗೌಡ,ಶಿವಶೇಖರ್‌, ಮೋದೂರು ಬಸವರಾಜ್‌ ಹಾಜರಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.