
ಮೈಸೂರು: ‘ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಂಬಾಕು ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಇವರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೋರಿದ್ದಾರೆ.
ಈ ಸಂಬಂಧ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿರುವ ಅವರು, ತಂಬಾಕು ಖರೀದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
‘ಈಗಿರುವ ಮಾಹಿತಿ ಪ್ರಕಾರ 10ಸಾವಿರ ಕಾರ್ಡ್‌ದಾರ ಬೆಳೆಗಾರರು ಸುಮಾರು 10ಮಿಲಿಯನ್ ಕೆ.ಜಿ. ತಂಬಾಕು ಬೆಳೆ ಬೆಳೆದಿದ್ದಾರೆ. ಆದರೆ, ಇದನ್ನು ಅನಧಿಕೃತ ಎಂದು ಘೋಷಿಸಿರುವುದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
‘ಆರ್ಥಿಕವಾಗಿ ತೀರಾ ಸಂಕಷ್ಟ ಎದುರಿಸುತ್ತಿರುವ ಬೆಳೆಗಾರರನ್ನು ಕಾಪಾಡಲು ಖರೀದಿಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ.
‘ಕಳೆದ ಹತ್ತು ವರ್ಷಗಳ ಲೆಕ್ಕಾಚಾರ ಗಮನಿಸಿದಾಗ, ನೋಂದಾಯಿತ ಹಾಗೂ ನೋಂದಾಯಿತರಲ್ಲದ ಬೆಳೆಗಾರರು ರಾಜ್ಯದಲ್ಲಿ 100 ಮಿಲಿಯನ್ ಕೆ.ಜಿ. ತಂಬಾಕು ಬೆಳೆಯುತ್ತಿದ್ದಾರೆ. ಆದರೆ, ಹವಾಮಾನ ವೈಪರೀತ್ಯ ಹಾಗೂ ಇತರ ಸಮಸ್ಯೆಗಳಿಂದಾಗಿ ಈ ಪ್ರಮಾಣ 80 ಮಿಲಿಯನ್ ಕೆ.ಜಿ.ಗೆ ಇಳಿದಿದೆ’ ಎಂದು ವಿವರಿಸಿದ್ದಾರೆ.
‘ನೋಂದಾಯಿತರಲ್ಲದವರಿಗೆ ‘ನೋಂದಾಯಿತ ತಂಬಾಕು ಬೆಳೆಗಾರರು’ ಎಂಬ ಮಾನ್ಯತೆ ನೀಡಬೇಕು. ಜೊತೆಗೆ ಖರೀದಿ ಪ್ರಮಾಣವನ್ನು ಶೇ. 10ರಷ್ಟು ಹೆಚ್ಚಿಸಬೇಕು. ಇದರಿಂದ ಒಟ್ಟಾರೆ ಪ್ರಮಾಣ ಜಾಸ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ತಂಬಾಕು ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಬೆಳೆಗಾರರಿಗೆ ನೆರವಾಗಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.