ADVERTISEMENT

ಹುಣಸೂರು: ತಂಬಾಕು ಹದಗೊಳಿಸುವಿಕೆ ಆರಂಭ

ಗುಣಮಟ್ಟಕ್ಕೆ ವೈಜ್ಞಾನಿಕ ಪದ್ಧತಿ ಅಳವಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
ಎಚ್.ಎಸ್.ಸಚ್ಚಿತ್
Published 18 ಜುಲೈ 2025, 5:16 IST
Last Updated 18 ಜುಲೈ 2025, 5:16 IST
ಹುಣಸೂರು ತಾಲ್ಲೂಕಿನ ಕಲ್ಕುಣಿಕೆ ಗ್ರಾಮದ ರೈತ ಕುಮಾರ್‌ ತಂಬಾಕನ್ನು ಹದಗೊಳಿಸುತ್ತಿರುವುದು
ಹುಣಸೂರು ತಾಲ್ಲೂಕಿನ ಕಲ್ಕುಣಿಕೆ ಗ್ರಾಮದ ರೈತ ಕುಮಾರ್‌ ತಂಬಾಕನ್ನು ಹದಗೊಳಿಸುತ್ತಿರುವುದು   

ಹುಣಸೂರು: ವಾಣಿಜ್ಯ ಬೆಳೆ ತಂಬಾಕು ಹದಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಸಾಲಿನಲ್ಲಿ ಮಾರುಕಟ್ಟೆ ಲಾಭ ತರಲಿದೆ ಎಂಬ ನಿರೀಕ್ಷೆ ಅನ್ನದಾತರದ್ದು.

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಾಟಿ ಮಾಡಿದ ತಂಬಾಕು ಹವಾಮಾನದ ವೈಪರೀತ್ಯಕ್ಕೆ ಸಿಲುಕಿ ಬೆಳವಣಿಗೆ ಕುಂಠಿತಗೊಂಡಿರುವುದು ಮತ್ತು ತೇವಾಂಶಕ್ಕೆ ನಾಶವಾಗಿತ್ತು. ಅದರ ನಡುವೆಯೂ ರೈತರು ಬೆಳೆ ಉಳಿಸಿಕೊಂಡಿದ್ದಾರೆ.

ತಂಬಾಕು ಇಳುವರಿ ಕುಂಠಿತವಾಗಿದ್ದರೂ ಗುಣಮಟ್ಟದ ಸೊಪ್ಪು ರೈತನ ಕೈ ಸೇರುತ್ತಿದ್ದು, ದುಪ್ಪಟ್ಟಾಗಿರುವ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ದರದ ನಿರೀಕ್ಷೆಯಲ್ಲಿ ರೈತರಿದ್ದಾರೆ.

ADVERTISEMENT

ಹದಗೊಳಿಸುವುದು ಹೀಗೆ:

ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಎಲೆಯನ್ನು 2 ಅಥವಾ 3 ಎಲೆಗಳನ್ನು ಗೊಂಚಲು ಮಾಡಿ ಕಡ್ಡಿಗೆ ಕಟ್ಟಬೇಕು. ಗೊಂಚಲು ಕಟ್ಟಿರುವ ಕಡ್ಡಿಯನ್ನು ಹದಗೊಳಿಸುವ ಬ್ಯಾರನ್‌ನಲ್ಲಿ ವೈಜ್ಞಾನಿಕವಾಗಿ ತೂಗು ಹಾಕುವುದರಿಂದ ಬೆಂಕಿ ಶಾಖಕ್ಕೆ ಸೊಪ್ಪು ಹದಗೊಳ್ಳುತ್ತದೆ ಎನ್ನುತ್ತಾರೆ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ರಾಮಕೃಷ್ಣ.

ಗುಣಮಟ್ಟ

ತಂಬಾಕು ಗುಣಮಟ್ಟ ಕಾಯ‌ದುಕೊಳ್ಳಲು ಹಸಿರಿನಿಂದ ಕೂಡಿದ ಎಲೆ ಕಠಾವು ಮಾಡಿದಲ್ಲಿ ಹದಗೊಳಿಸುವಾಗ ತರಗು ಅಥವಾ ಕಪ್ಪು ಬಣ್ಣಕ್ಕೆ ತಿರುಗಲಿದೆ. ಇದರಿಂದ ಆರ್ಥಿಕ ನಷ್ಟವಾಗುತ್ತದೆ. 2025-26ನೇ ಸಾಲಿನಲ್ಲಿ ಮಳೆ ಏರುಪೇರಿನಿಂದಾಗಿ ಇಳುವರಿ ಕುಂಠಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಕಠಾವಿಗೆ ಬಂದಿರುವ ಎಲೆಯನ್ನು ಕಿತ್ತು, ಗೊಂಚಲು ಮಾಡಿ ಸೊಪ್ಪನ್ನು ಪ್ರತಿ ಕಡ್ಡಿಗೆ 20 ಗೊಂಚಲುಗಳನ್ನಷ್ಟೇ ಕಟ್ಟಬೇಕು ಎಂದು ಅವರು ಮಾಹಿತಿ ನೀಡಿದರು.

ವಿಂಗಡಣೆ

ತಂಬಾಕು ಹದಗೊಳಿಸುವಾಗ ಮೂರು ಹಂತದಲ್ಲಿ (ಹಸಿರು ಎಲೆ, ಹಸಿರು ಮತ್ತು ಹಳದಿ ಮಿಶ್ರಿತ ಸೊಪ್ಪು ಮತ್ತು ಹಣ್ಣಾದ ಎಲೆ) ವಿಂಗಡಿಸಿಕೊಂಡು ಬ್ಯಾರನ್‌ನಲ್ಲಿ ನೇತು ಹಾಕುವುದರಿಂದ ಬೆಂಕಿಯ ಶಾಖ ಸಮನಾಗಿ ಹರಡಿ ನಿರೀಕ್ಷೆಯಂತೆ ಹದಗೊಂಡು ಗುಣಮಟ್ಟದ ತಂಬಾಕು ಸಿಗಲಿದೆ.

ಸಿಂಗಲ್‌ ಬ್ಯಾರನ್‌ಗೆ 350ಕ್ಕೂ ಹೆಚ್ಚು ಕಡ್ಡಿಯನ್ನು ನೇತು ಹಾಕುವುದರಿಂದ ಶಾಖ ಹೆಚ್ಚಾಗಿ ಸೊಪ್ಪು ಸುಟ್ಟು ಹೋಗುವ ಸಾಧ್ಯತೆ ಇದೆ. ವೈಜ್ಞಾನಿಕವಾಗಿ ಹದಗೊಳಿಸುವುದರಿಂದ ಬೆಂಕಿ ಶಾಖ ಸಮನಾಗಿ ಎಲ್ಲಾ ಎಲೆಗಳಿಗೂ ಸಿಕ್ಕು ಪ್ರಥಮ ದರ್ಜೆ ಸೊಪ್ಪು ಪಡೆಯಬಹುದು ಎಂದು ರಾಮಕೃಷ್ಣ ತಿಳಿಸಿದರು.

ಬೇಡಿಕೆ ಹೆಚ್ಚಳ ನಿರೀಕ್ಷೆ

2024-25ನೇ ಸಾಲಿನಲ್ಲಿ ತಂಬಾಕು 85 ದಶಲಕ್ಷ ಕೆ.ಜಿ. ಮಾರಾಟವಾಗಿತ್ತು. ಈ ಸಾಲಿನಲ್ಲಿ 70 ದಶಲಕ್ಷ ಕೆ.ಜಿ. ಉತ್ಪಾದನೆಯಾಗುವ ನಿರೀಕ್ಷೆ ಇದ್ದು ಕಳೆದ ಸಾಲಿಗೆ ಶೇ 15ರಷ್ಟು ಇಳುವರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದರ ಸಿಗುವ ನಿರೀಕ್ಷೆ ಇದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂ ಗೌಡ ತಿಳಿಸಿದರು.

ಮಳೆಗೆ ಇಳುವರಿ ಕುಸಿತ ಅತಿಯಾದ ಮಳೆಗೆ ಇಳುವರಿ ಕುಸಿದಿದ್ದು ಸಿಕ್ಕಷ್ಟು ತಂಬಾಕು ವೈಜ್ಞಾನಿಕವಾಗಿ ಹದಗೊಳಿಸುವ ಪ್ರಕ್ರಿಯೆ ನಡೆದಿದೆ. ಗುಣಮಟ್ಟದ ಸೊಪ್ಪಿನ ನಿರೀಕ್ಷೆಯಲ್ಲಿದ್ದು ಕಳೆದ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 300 ಇತ್ತು. ಈ ಬಾರಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹ 400 ನೀಡಿದರೆ ನಷ್ಟದಿಂದ ಪಾರಾಗಲು ಸಾಧ್ಯ ಎಂದು ಕಲ್ಕುಣಿಕೆ ಗ್ರಾಮದ ಪ್ರಗತಿಪರ ರೈತ ಕುಮಾರ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.