ADVERTISEMENT

ಟೊಮೆಟೊ ದರ ದುಪ್ಪಟ್ಟು: ಹೈರಣಾದ ಖರೀದಿದಾರರು

ಇಳಿಯದ ತರಕಾರಿಗಳ ಧಾರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 2:44 IST
Last Updated 16 ಏಪ್ರಿಲ್ 2019, 2:44 IST
   

ಮೈಸೂರು: ಬೇಸಿಗೆಯ ಬಿಸಿಲು ಮತ್ತಷ್ಟು ಹೆಚ್ಚುತ್ತಿದ್ದು, ತರಕಾರಿ ಗಿಡಗಳು ಬಾಡುತ್ತಿವೆ. ಕಳೆದ ವಾರ ಒಂದು ದಿನ ಮಾತ್ರ ಮಳೆ ಬಿದ್ದಿತ್ತು. ಅದೂ ಕೆಲವು ತಾಲ್ಲೂಕುಗಳಿಗೆ ಬಿದ್ದಿಲ್ಲ. ಇದರಿಂದ ತರಕಾರಿ ಬೆಳೆಗಳು ಸೇರಿದಂತೆ ಯಾವುದೇ ಬೆಳೆಗಳಿಗೂ ಅನುಕೂಲವಾಗಿಲ್ಲ. ದಿನದಿಂದ ದಿನಕ್ಕೆ ಇಳುವರಿ ಕಡಿಮೆಯಾಗುತ್ತಿದ್ದು, ತರಕಾರಿಗಳ ಬೆಲೆಗಳು ಒಂದೇ ಸಮನೇ ಏರಿಕೆ ಕಾಣುತ್ತಿವೆ.

ಈ ವಾರ ಟೊಮೆಟೊ ದರ ದುಪ್ಪಟ್ಟಾಗಿದೆ. ಕಳೆದ ವಾರ ಕೆ.ಜಿಗೆ ಸಗಟು ಧಾರಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 15 ಇತ್ತು. ಈಗ ಇದರ ಧಾರಣೆ ₹ 30 ಆಗಿದೆ. ಮಾರುಕಟ್ಟೆಯಲ್ಲಿ ಕೇರಳ ವರ್ತಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಜತೆಗೆ, ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಸಹಜವಾಗಿಯೇ ಟೊಮೆಟೊಗೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಸಮನಾಗಿ ಪೂರೈಕೆಯಲ್ಲಿ ಹೆಚ್ಚಳವಾಗಿಲ್ಲದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಇದರ ಜತೆಗೆ, ಬೀನ್ಸ್ ಧಾರಣೆಯೂ ದುಬಾರಿಯಾಗುತ್ತಿದೆ. ಕಳೆದ ವಾರವೇ ಕೆ.ಜಿಗೆ ₹ 50ನ್ನು ಸಗಟು ಬೆಲೆ ತಲುಪಿತ್ತು. ಈಗ ಇದು ₹ 60 ಆಗಿದೆ. ಖರೀದಿದಾರರಂತು ಬೆಲೆ ಕೇಳಿ ಹೌಹಾರುವಂತಾಗಿದೆ.‌

ADVERTISEMENT

ಸದ್ಯ, ಬದನೆಕಾಯಿ ಬೆಲೆ ಮಾತ್ರ ತುಸು ಇಳಿಕೆ ಕಂಡಿದೆ. ಇದರ ಸಗಟು ಧಾರಣೆ ₹ 20 ಇದ್ದದ್ದು ಇದೀಗ ₹ 15 ಆಗಿದೆ. ಉಳಿದಂತೆ ಎಲ್ಲ ತರಕಾರಿಗಳ ಬೆಲೆಗಳೂ ಹೆಚ್ಚಳವಾಗಿವೆ.‌

ಧಾನ್ಯಗಳ ದರ ಸ್ಥಿರ

ಈ ವಾರ ಧಾನ್ಯಗಳ ಸಗಟು ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತೊಗರಿಬೇಳೆ ಸಗಟು ಧಾರಣೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 82, ಉದ್ದಿನಬೇಳೆ ₹ 80, ಹೆಸರುಬೇಳೆ ₹ 74 ಹಾಗೂ ಹೆಸರುಕಾಳು ₹ 74ರಲ್ಲೇ ಮುಂದುವರಿದಿವೆ.

ಕೋಳಿಮೊಟ್ಟೆ ಧಾರಣೆ ಚೇತರಿಕೆ

ಸತತ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕೋಳಿ ಮೊಟ್ಟೆ ಉತ್ಪಾದಕರು ಮೊಟ್ಟೆ ಬೆಲೆ ಚೇತರಿಕೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವಾರ ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.47 ‌ಇತ್ತು. ಅದು ಈಗ ₹ 3.65 ಆಗಿದೆ.

ಕೋಳಿ ಮಾಂಸದ ದರ ಈ ವಾರ ಕಡಿಮೆಯಾಗಿದೆ. ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್‌ನ ಬ್ರಾಯ್ಲರ್ ಕೋಳಿ ಮಾಂಸದ ದರ ಕೆ.ಜಿಗೆ ₹ 100 ಇದ್ದದ್ದು, ಇದೀಗ ₹ 88ಕ್ಕೆ ಇಳಿಕೆಯಾಗಿದೆ. ಪೇರೆಂಟ್‌ ಕೋಳಿ ಮಾಂಸದ ದರವು ಕೆ.ಜಿಗೆ ₹ 100ರಲ್ಲೇ ಮುಂದುವರಿದಿದೆ.

ಮಾವು ಆವಕ; ಬೆಲೆ ದುಬಾರಿ

ನಗರದ ಮಾರುಕಟ್ಟೆಗೆ ಮಾವಿನಹಣ್ಣಿನ ಆವಕ ತೀರಾ ಕಡಿಮೆಯಾಗಿದೆ. ದರ ತೀರಾ ದುಬಾರಿಯಾಗಿದೆ. ಬಾದಾಮಿ ಮಾವಿನಹಣ್ಣಿನ ಬೆಲೆ ಕೆ.ಜಿಗೆ ₹ 180 ಇತ್ತು. ಮಿಡಿಮಾವಿನಕಾಯಿಗಳೂ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ, ಇವುಗಳ ದರವೂ ಹೆಚ್ಚಾಗಿದೆ. ಮಾವುಪ್ರಿಯರು ಇನ್ನೂ ಒಂದೆರಡು ವಾರಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಸದ್ಯ, ಬಂದಿರುವ ಮಾವಿನಹಣ್ಣುಗಳು ರಾಸಾಯನಿಕ ಬಳಸಿ ಹಣ್ಣು ಮಾಡಿರುವಂತದ್ದು ಎಂದು ಕೆಲವು ಗ್ರಾಹಕರು ಸಂಶಯ ವ್ಯಕ್ತಪಡಿಸಿದ್ದಾರೆ.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 15; 30

ಬೀನ್ಸ್ ; 50; 60

ಕ್ಯಾರೆಟ್; 25; 28

ಎಲೆಕೋಸು; 14; 15

ದಪ್ಪಮೆಣಸಿನಕಾಯಿ; 52; 50

ಬದನೆ ; 20;15

ನುಗ್ಗೆಕಾಯಿ; 16; 25

ಹಸಿಮೆಣಸಿನಕಾಯಿ; 40; 40

ಈರುಳ್ಳಿ; 10; 12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.