ADVERTISEMENT

ಜಾತ್ರೆಯಲ್ಲಿ ನಾಡಕುಸ್ತಿಯ ರಂಗು

ಪರಮೇಶ್‌ ‘ಸುತ್ತೂರು ಕುಮಾರ’, ಶಿವರಾಜು ‘ಸುತ್ತೂರು ಕಿಶೋರ’, ಚೇತನ್‌ ‘ಸುತ್ತೂರು ಕೇಸರಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:35 IST
Last Updated 20 ಜನವರಿ 2026, 4:35 IST
'ಸುತ್ತೂರು ಕುಮಾರ’ ಪ್ರಶಸ್ತಿ ಹಾಗೂ ಬೆಳ್ಳಿ ಗದೆಯೊಂದಿಗೆ ಕ್ಯಾತನಹಳ್ಳಿಯ ಪರಮೇಶ್ 
'ಸುತ್ತೂರು ಕುಮಾರ’ ಪ್ರಶಸ್ತಿ ಹಾಗೂ ಬೆಳ್ಳಿ ಗದೆಯೊಂದಿಗೆ ಕ್ಯಾತನಹಳ್ಳಿಯ ಪರಮೇಶ್    

ನಂಜನಗೂಡು: ಪೈಲ್ವಾನರಾದ ಕ್ಯಾತನಹಳ್ಳಿಯ ಪರಮೇಶ್‌ ಹಾಗೂ ನಂಜನಗೂಡು ಶಿವರಾಜು ಅವರು ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ನಡೆದ ನಾಡ ಕುಸ್ತಿಯಲ್ಲಿ ಕ್ರಮವಾಗಿ ‘ಸುತ್ತೂರು ಕುಮಾರ’ ಹಾಗೂ ‘ಸುತ್ತೂರು ಕಿಶೋರ’ ಪ್ರಶಸ್ತಿ ಎತ್ತಿ ಹಿಡಿದರು. ನಜರಬಾದ್‌ನ ಚೇತನ್‌ ಗೌಡ ‘ಸುತ್ತೂರು ಕೇಸರಿ’ ಆಗಿ ಹೊರಹೊಮ್ಮಿದರು.

‘ಸುತ್ತೂರು ಕುಮಾರ್’ ಪ್ರಶಸ್ತಿಗಾಗಿ ಪರಮೇಶ್ ಹಾಗೂ ಮೈಸೂರಿನ ಇಸ್ಮಿಯಾನ್ ಗರಡಿಯ ಜೈದ್ ಖುರೇಶಿ 3 ಗಂಟೆಗೂ ಹೆಚ್ಚು ಕಾಲ ಸೋಲು –ಗೆಲುವಿನ ಮಾರ್ಫಿಟ್ ಹಣಾಹಣಿ ನಡೆಯಿತು. ಆರಂಭದಿಂದಲೂ ಹಿಡಿತ ಸಾಧಿಸಿದ್ದ ಪರಮೇಶ್, ಜೈದ್‌ರನ್ನು ಚಿತ್‌ ಮಾಡಿದರು.

‘ಸುತ್ತೂರು ಕಿಶೋರ’ ಪ್ರಶಸ್ತಿಗಾಗಿ ಶಿವರಾಜು ಹಾಗೂ ಹೊಸಕೋಟೆಯ ಕುಮಾರ ನಾಯಕ ಸೆಣೆಸಿದರು. ಅಂತಿಮವಾಗಿ ಶಿವರಾಜು ಗೆಲುವಿನ ನಗೆ ಬೀರಿದರು. ‘ಸುತ್ತೂರು ಕೇಸರಿ’ಗಾಗಿ ನಡೆದ ಹಣಾಹಣಿಯಲ್ಲಿ ಚೇತನ್ ಗೌಡ ಶ್ರೀರಂಗಪಟ್ಟಣದ ಗಂಜಾಂನ ಮಂಜುರನ್ನು ಮಣ್ಣು ಮುಕ್ಕಿಸಿದರು.

ADVERTISEMENT

ಹೊರ ರಾಜ್ಯಗಳ ಜೋಡಿಗಳೂ ಕುಸ್ತಿಯಲ್ಲಿ ಸೆಣೆಸಿದವು. ಹರಿಯಾಣದ ಸೋನಾಪತ್ ಅಖಾಡದ ಹರ್ಷಕುಮಾರ್ ಚಾಧರಿ ಅವರು ಮಧ್ಯಪ್ರದೇಶದ ಮುದಾಸಿರ್ ಖಾನ್ ರನ್ನು ಮಣಿಸಿದರೆ, ಮಹಾರಾಷ್ಟ್ರದ ಸಾಂಗ್ಲಿಯ ಪೈ. ನಾಥ ಲಾವ ಪವಾರ್ ಅವರು ಪುಣೆಯ ಅವಿನಾಶ್ ಲಕ್ಷಣ್ ಗವಾಡೆರನ್ನು ಚಿತ್‌ ಮಾಡಿದರು.

ಒಟ್ಟು 80 ಜೋಡಿಗಳು ಕುಸ್ತಿ ಅಖಾಡದಲ್ಲಿ ಸೆಣೆಸಿದ್ದು, ಅಪಾರ ಸಂಖ್ಯೆಯಲ್ಲಿ ಜನ ನೆರೆದು ಶಿಳ್ಳೆ–ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು.

ಚಾಲನೆ: ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಮ್ಮುಖದಲ್ಲಿ ಶಾಸಕ ರಿಜ್ವಾನ್‌ ಹರ್ಷದ್‌ ಕುಸ್ತಿ ಪಂದ್ಯಗಳಿಗೆ ಚಾಲನೆ ನೀಡಿದರು. ‘ಧರ್ಮ, ಜಾತಿಗಳ ಭೇದವಿಲ್ಲದೆ ಎಲ್ಲ ವರ್ಗಗಳ ಪೈಲ್ವಾನರು ಸುತ್ತೂರಿನಲ್ಲಿ ನಡೆಯುವ ಕುಸ್ತಿಯಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ಸಂಗತಿ’ ಎಂದರು.

ಶಾಸಕ ತನ್ವೀರ್‌ ಸೇಠ್‌, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್‌ ಇದ್ದರು.

ಸುತ್ತೂರು ನಾಡಕುಸ್ತಿಯಲ್ಲಿ ಪೈಲ್ವಾನರ ಸೆಣೆಸಾಟ