ADVERTISEMENT

ಮೈಸೂರು | 2010ರ ಪ್ರಕರಣ: 31 ಜನರ ಸಾವಿಗೆ ಕಾರಣರಾದವರಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 12:45 IST
Last Updated 25 ಏಪ್ರಿಲ್ 2025, 12:45 IST
<div class="paragraphs"><p>ಪ್ರಾಧಿನಿಧಿಕ ಚಿತ್ರ</p></div>

ಪ್ರಾಧಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

ಮೈಸೂರು: ಮೈಸೂರು–ನಂಜನಗೂಡು ಮುಖ್ಯರಸ್ತೆಯಲ್ಲಿರುವ ಉಂಡಭತ್ತಿ ಕೆರೆಯ ಏರಿಯ ಮೇಲೆ ಪ್ಯಾಸೆಂಜರ್‌ ಟೆಂಪೋ ಮಗುಚಿ 31 ಪ್ರಯಾಣಿಕರು ಸಾವನ್ನಪ್ಪಿದ ಪ್ರಕರಣದಲ್ಲಿ ಟೆಂಪೋ ಚಾಲಕ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿ ಗ್ರಾಮದ ನಿವಾಸಿ ಚೇತನ್‌ ಕುಮಾರ್‌ಗೆ 3 ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ 11ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ.

ADVERTISEMENT

ಚೇತನ್‌ ಕುಮಾರ್‌ ಅವರು ಪಾಲಹಳ್ಳಿ ನಿವಾಸಿ ಸಂಜೀವ ಮೂರ್ತಿ ಅವರಿಗೆ ಸೇರಿದ ಪ್ಯಾಸೆಂಜರ್‌ ಟೆಂಪೋದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 2010ರ ಡಿಸೆಂಬರ್‌ 14ರಂದು ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಪ್ಯಾಸೆಂಜರ್‌ ಟೆಂಪೋದಲ್ಲಿ 40 ಪ್ರಯಾಣಿಕರನ್ನು ಕೂರಿಸಿಕೊಂಡು ಬರುತ್ತಿದ್ದರು. ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಜನ ಇದ್ದ ಕಾರಣ ಉಂಡಭತ್ತಿ ಕೆರೆಯ ಏರಿಯ ಮೇಲೆ ಟೆಂಪೋ ಮಗುಚಿ ನೀರಿಗೆ ಬಿದ್ದು, ನಾಲ್ವರು ಮಕ್ಕಳೂ ಸೇರಿದಂತೆ 31 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯ ಬಗ್ಗೆ ಅಂದಿನ ಡಿವೈಎಸ್‌ಪಿ ಸಿ.ಡಿ.ಜಗದೀಶ್‌ ಅವರು ಮೈಸೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸಂಜಯ್‌ ಎಂ. ಮಲ್ಲಿಕಾರ್ಜುನಯ್ಯ ವಿಚಾರಣೆ ನಡೆಸಿ, ಚಾಲಕ ಚೇತನ್‌ ಕುಮಾರ್‌ಗೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ₹12,600 ದಂಡ ಮತ್ತು ಟೆಂಪೋ ಮಾಲಿಕ ಸಂಜೀವ ಮೂರ್ತಿಗೆ 1 ವರ್ಷ ಜೈಲು ಮತ್ತು ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಎನ್‌.ಸೌಮ್ಯ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.