ADVERTISEMENT

ಚಾಮುಂಡಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಪಾಥ್ ನಿರ್ಮಿಸಿ: ತಜ್ಞರ ತಂಡ

ರಸ್ತೆ ಕುಸಿತ; ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ತಜ್ಞರ ಸಮಿತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 19:45 IST
Last Updated 1 ಡಿಸೆಂಬರ್ 2021, 19:45 IST
ಚಾಮುಂಡಿಬೆಟ್ಟದ ಕುಸಿತಕ್ಕೆ ಸಂಬಂಧಿಸಿದ ಶಿಫಾರಸು ವರದಿಯನ್ನು ಎಂಜಿನಿಯರುಗಳ ಸಂಸ್ಥೆಯ ತಾಂತ್ರಿಕ ತಜ್ಞರ ತಂಡದ ಸದಸ್ಯರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಬುಧವಾರ ಸಲ್ಲಿಸಿದರು. ಎಂ.ಕೆ.ನಂಜಯ್ಯ, ಡಾ.ಎಸ್.ಜಿ.ಒಂಬತ್ಕೆರೆ, ಬಿ.ಎಸ್.ಪ್ರಭಾಕರ, ಎಂ.ಲಕ್ಷ್ಮಣ, ಎಚ್.ಎಸ್‌.ಸುರೇಶ್‌ಬಾಬು ಇದ್ದಾರೆ
ಚಾಮುಂಡಿಬೆಟ್ಟದ ಕುಸಿತಕ್ಕೆ ಸಂಬಂಧಿಸಿದ ಶಿಫಾರಸು ವರದಿಯನ್ನು ಎಂಜಿನಿಯರುಗಳ ಸಂಸ್ಥೆಯ ತಾಂತ್ರಿಕ ತಜ್ಞರ ತಂಡದ ಸದಸ್ಯರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಬುಧವಾರ ಸಲ್ಲಿಸಿದರು. ಎಂ.ಕೆ.ನಂಜಯ್ಯ, ಡಾ.ಎಸ್.ಜಿ.ಒಂಬತ್ಕೆರೆ, ಬಿ.ಎಸ್.ಪ್ರಭಾಕರ, ಎಂ.ಲಕ್ಷ್ಮಣ, ಎಚ್.ಎಸ್‌.ಸುರೇಶ್‌ಬಾಬು ಇದ್ದಾರೆ   

ಮೈಸೂರು: ‘ಚಾಮುಂಡಿಬೆಟ್ಟದಲ್ಲಿ ಕುಸಿದಿರುವ ರಸ್ತೆಯನ್ನು ದುರಸ್ತಿಗೊಳಿಸುವುದು ಹಾಗೂ ಸಂಪೂರ್ಣವಾಗಿ ಮರು
ನಿರ್ಮಾಣ ಮಾಡುವುದರ ಬದಲು ಟ್ರೆಕ್ಕಿಂಗ್ ಪಾಥ್‌ ನಿರ್ಮಿಸುವುದು ಒಳಿತು’ ಎಂದು ಎಂಜಿನಿಯರುಗಳ ಸಂಸ್ಥೆಯ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ಈ ಕುರಿತ 7 ‍ಪುಟಗಳ ವರದಿಯನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ತಂಡದ ಸದಸ್ಯರು ಬುಧವಾರ ಸಲ್ಲಿಸಿದರು. ‘ವ್ಯೂ ಪಾಯಿಂಟ್‌ನಿಂದ ನಂದಿಗೆ ಹೋಗುವ 1.4 ಕಿ.ಮೀ ರಸ್ತೆಯು ಪದೇ ಪದೇ ಕುಸಿಯುತ್ತಿದೆ. ಅದನ್ನು ಮತ್ತೆ ಮತ್ತೆ ದುರಸ್ತಿಗೊಳಿಸುವುದು ದುಬಾರಿ. ಹೀಗಾಗಿ, ಅಂದಾಜು ₹ 30 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ಮರು ನಿರ್ಮಿಸಬೇಕು’ ಎಂದು ಹೇಳಿದರು.

‘ದೊಡ್ಡ ಯೋಜನೆಯ ಬದಲಿಗೆ ಟ್ರೆಕ್ಕಿಂಗ್ ಪಾಥ್ ನಿರ್ಮಿಸಿದರೆ ಹಣದ ಉಳಿತಾಯವಾಗುತ್ತದೆ. ಬೆಟ್ಟ ಹತ್ತುವವರಿಗೆ ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ ಸಿಗುತ್ತದೆ’ ಎಂದು ತಂಡದ ಡಾ.ಎಸ್.ಜಿ.ಒಂಬತ್ಕೆರೆ ಪ್ರತಿಪಾದಿಸಿದರು.

ADVERTISEMENT

‘1903ರಲ್ಲಿ ಬೆಟ್ಟವನ್ನೇ ಕೊರೆದು ರಸ್ತೆಯನ್ನು ನಿರ್ಮಿಸಿದ್ದು ನೀರು ಹರಿಯಲು ವ್ಯವಸ್ಥೆಯಿಲ್ಲ. ಚರಂಡಿಗಳಲ್ಲಿ ಹೂಳು ತುಂಬಿದೆ. ನೀರು ರಭಸವಾಗಿ ಹರಿದು ಕುಸಿತ ಉಂಟಾಗುತ್ತಿದೆ. ರಸ್ತೆ ಮರುನಿರ್ಮಾಣಕ್ಕೆ ಕೆಳ ಭಾಗದಿಂದ 800 ಮೀಟರ್‌ ಉದ್ದದ ರಸ್ತೆಯ ಭಾರವನ್ನು ಹೊರುವಂತಹ ಗೋಡೆಯನ್ನು ನಿರ್ಮಿಸದಿದ್ದರೆ ಅಪಾಯ ಖಚಿತ’ ಎಂದರು.

‘ಹವಾಮಾನ ವೈಪರೀತ್ಯ ಮತ್ತು ಬದಲಾವಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಐಪಿಸಿಸಿ (ಇಂಟರ್‌ ಗವರ್ನ್‌ಮೆಂಟಲ್‌ ಫ್ಯಾನಲ್‌ ಆನ್‌ ಕ್ಲೈಮೇಟ್‌ ಚೇಂಜ್‌) ಈಗಾಗಲೇ ಹವಮಾನ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಅಧಿಕ ಮಳೆ ಬೀಳುವ ಕುರಿತು ವರದಿ
ಗಳನ್ನು ನೀಡಿದೆ. ಹೀಗಾಗಿ, ಹೊಸದಾಗಿ ನಿರ್ಮಿಸುವ ರಸ್ತೆಯಲ್ಲೂ ಮತ್ತೆ ಕುಸಿತ ಉಂಟಾಗಿ, ನಿರ್ವಹಣಾ ವೆಚ್ಚ ಅಧಿಕವಾಗಲಿದೆ’ ಎಂದು ಹೇಳಿದರು.

ತಂಡದ ಎಂಜಿನಿಯರ್‌ಗಳಾದ ಬಿ.ಎಸ್.ಪ್ರಭಾಕರ, ಎಚ್.ಕಿಶೋರ ಚಂದ್ರ, ಎಚ್.ಎಸ್.ಸುರೇಶ್‌ಬಾಬು, ಎಂ.ಕೆ.ನಂಜಯ್ಯ ಹಾಗೂ ಎಂ.ಲಕ್ಷ್ಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.