ADVERTISEMENT

ಆದಿವಾಸಿಗಳ ನೃತ್ಯ, ಸಂಗೀತ ಕಲಿಕೆಗೆ ಕೋರ್ಸ್‌: ಕುಲಪತಿ ಪ್ರೊ.ವಿ.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:34 IST
Last Updated 10 ಆಗಸ್ಟ್ 2022, 13:34 IST
   

ಮೈಸೂರು: ‘ಜಾನಪದ ಹಾಗೂ ಆದಿವಾಸಿಗಳ ನೃತ್ಯ, ಸಂಗೀತ ಕಲೆಗಳ ಕುರಿತು ಸರ್ಟಿಫಿಕೆಟ್‌ ಅಥವಾ ಡಿಪ್ಲೊಮಾ ಕೋರ್ಸ್‌ ಆರಂಭಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ನಾಗೇಶ್‌ ಬೆಟ್ಟಕೋಟೆ ತಿಳಿಸಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯ, ಅಖಿಲ ಭಾರತ ಜಾನಪದ ಹಾಗೂ ಬುಡಕಟ್ಟು ಪರಿಷತ್‌, ಕೆಎಸ್‌ಒಯು ಮತ್ತು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಮತ್ತು ‘ವಿಶ್ವ ಆದಿವಾಸಿ ದಿನ’ದ ಪ್ರಯುಕ್ತ ಆಯೋಜಿಸಿದ್ದ ‘ಆದಿವಾಸಿ ನೃತ್ಯ ಮಹೋತ್ಸವ’ದಲ್ಲಿ ಬುಧವಾರ ನಡೆದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋರ್ಸ್ ಆರಂಭಕ್ಕೆ ಸಂಬಂಧಿಸಿ ಜಾನಪದ ಲೋಕದ ನೆರವು ಪಡೆಯಲಾಗುತ್ತಿದೆ. ಅಧ್ಯಯನ ಮಂಡಳಿ ರಚಿಸಲು ಅನುಮೋದನೆ ತೆಗೆದುಕೊಳ್ಳಲಾಗಿದೆ’ ಎಂದರು.

ADVERTISEMENT

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಿ.ವಿಯಿಂದ ದೇವನಹಳ್ಳಿಯಲ್ಲಿ ಡೋಲು, ನಾದಸ್ವರ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಅಲ್ಲಿ, ಆದಿವಾಸಿಗಳ ಕಲೆಯ ಪದ್ಧತಿಯನ್ನು ಕಲಿಸುವ ಕಾರ್ಯ ಆರಂಭಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನ ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.

ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ರಾಜೇಶ್‌ ಜಿ.ಗೌಡ ಮಾತನಾಡಿ, ‘ಸಂಸ್ಥೆಯಿಂದ ರಾಷ್ಟ್ರಮಟ್ಟದ ಆದಿವಾಸಿ ನೃತ್ಯ ಮಹೋತ್ಸವವನ್ನು ಬಳ್ಳಾರಿಯಲ್ಲಿ ಸೆಪ್ಟೆಂಬರ್‌ 2ನೇ ಅಥವಾ 3ನೇ ವಾರ ನಡೆಸಲು ನಿರ್ಧರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗುವುದು. ಆದಿವಾಸಿಗಳ ಕಲೆ, ಆಚಾರ–ವಿಚಾರಗಳ ದಾಖಲೀಕರಣಕ್ಕೆ ಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.