
ಪಿರಿಯಾಪಟ್ಟಣ: ಗಿರಿಜನರು ಶಿಕ್ಷಣದ ಮೂಲಕ ಜಾಗೃತಿ ಹೊಂದಬೇಕು ಎಂದು ತಹಶೀಲ್ದಾರ್ ನಿಸರ್ಗ ಪ್ರಿಯ ತಿಳಿಸಿದರು.
ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಿರಿಜನರು ಉತ್ತಮ ವಿದ್ಯಾಭ್ಯಾಸ ಮಾಡಿ ಅರಿವಿನ ಜಾಗೃತಿ ಹೊಂದಬೇಕು. ಬಾಲ್ಯ ವಿವಾಹ ಮಾಡಬೇಡಿ, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು. ಸರ್ಕಾರ ನಿಮ್ಮ ಅಭಿವೃದ್ಧಿಗೆ ಬದ್ಧವಾಗಿದೆ. ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಿ. ಗಿರಿಜನರು ಹೊರ ಪ್ರಪಂಚದ ಬಗ್ಗೆ ಅರಿಯಲು ಪ್ರತಿನಿತ್ಯ ಪತ್ರಿಕೆ ಓದಿ ಎಂದು ಕರೆ ನೀಡಿದರು.
ತಾ.ಪಂ. ಮಾಜಿ ಸದಸ್ಯ ಟಿ.ಈರಯ್ಯ ಮಾತನಾಡಿ, ಬಿರ್ಸಾ ಮುಂಡಾ ಅವರು ಅಲ್ಪಾವಧಿ ಜೀವಿಸಿದ್ದರು ಕೂಡ ಶತಮಾನ ಕಳೆದರು ನೆನಪಿಸಿಕೊಳ್ಳುತ್ತಿದ್ದೇವೆ, ಇದಕ್ಕೆ ಇವರ ಹೋರಾಟದ ಕ್ರಾಂತಿಕಾರಿ ನಡೆಯೇ ಕಾರಣ. ಪ್ರತಿಯೊಬ್ಬ ಚಳವಳಿಗಾರಿಗೆ ಇವರು ಸ್ಫೂರ್ತಿಯಾಗಿದ್ದಾರೆ, ಬ್ರಿಟಿಷ್ ವಿರುದ್ದ ಹೋರಾಡಿ ತಮ್ಮ ಜೀವ ಕಳೆದುಕೊಂಡರು ಎಂದರು.
ಈ ಸಮುದಾಯಗಳಲ್ಲಿ ಸಾಕಷ್ಟು ಉಪ ಪಂಗಡಗಳಿದ್ದು, ಎಲ್ಲರೂ ಒಂದಾಗಬೇಕು, ಸಮಾಜದಲ್ಲಿ ಅಸ್ಪೃಶ್ಯತೆ ಹೋಗಿಲ್ಲ, ಪ್ರತಿನಿತ್ಯ ನೋವು ಕಾಡುತ್ತಿದೆ. ಸಮಾಜದ ಅಭಿವೃದ್ಧಿ ಬಗ್ಗೆ ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ಬಿರ್ಸಾ ಮುಂಡಾರ ಹೋರಾಟದ ಕಿಚ್ಚು ಮನೆಮನೆಗಳಲ್ಲಿ ಹಚ್ಚಬೇಕು. ಸಮುದಾಯಗಳು ಒಂದುಗೂಡದೆ ಹೋದರೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ನೆಪ ಮಾತ್ರಕ್ಕೆ ಭರವಸೆ ನೀಡದೆ ಈ ಆದಿವಾಸಿ ಸಮುದಾಯಕ್ಕೆ ವ್ಯವಸಾಯಕ್ಕೆ ಭೂಮಿ ಮತ್ತು ಜೀವಿಸಲು ಉದ್ಯೋಗವನ್ನು ಸೃಷ್ಟಿ ಮಾಡಿಕೊಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಪಿಡಿಒ ಮೋಹನ್, ಜೇನು ಕುರುಬ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರಾಜಪ್ಪ, ಜಿಲ್ಲಾಧ್ಯಕ್ಷ ಬಸವಣ್ಣ, ಎಸ್‌ಟಿಎಸ್‌ಸಿ ಸಮಿತಿ ಸದಸ್ಯ ಜಯಪ್ಪ, ಮುಖಂಡರಾದ ಸಿದ್ದು, ಚಂದ್ರು, ಶಿವಣ್ಣ, ಹರೀಶ್, ಭೋಜಯ್ಯ, ಅಣ್ಣಯ್ಯ, ಲಿಂಗಪ್ಪ, ಬಸವಣ್ಣ, ತಿಮ್ಮ, ನಾಗರಹೊಳೆ ತಿಮ್ಮ, ಜೆ.ಎಂ.ಸ್ವಾಮಿ, ಕಿರಂಗೂರು ಸ್ವಾಮಿ, ಲಿಂಗಪ್ಪ, ಜಾನಕಮ್ಮ, ಸೋಮಮ್ಮ, ರಾಜು, ಗೌರಮ್ಮ, ವೆಂಕಟಸ್ವಾಮಿ, ಸಣ್ಣಪ್ಪ, ಕಾಳಿಂಗ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.