ADVERTISEMENT

ನಂಜನಗೂಡು: ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಆದಿವಾಸಿಗಳ ಮೇಲೆ ಸುಳ್ಳು ಆರೋಪ, ಬಂಧನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 16:20 IST
Last Updated 30 ಸೆಪ್ಟೆಂಬರ್ 2020, 16:20 IST
ನಂಜನಗೂಡು ತಾಲ್ಲೂಕಿನ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಆದಿವಾಸಿಗಳು , ಸುಳ್ಳು ಆರೋಪದ ಮೇಲೆ ಅರಣ್ಯಾಧಿಕಾರಿಗಳು ಬಂಧಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬುಧವಾರ ಪ್ರತಿಭಟನೆ ನಡೆಸಿದರು
ನಂಜನಗೂಡು ತಾಲ್ಲೂಕಿನ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಆದಿವಾಸಿಗಳು , ಸುಳ್ಳು ಆರೋಪದ ಮೇಲೆ ಅರಣ್ಯಾಧಿಕಾರಿಗಳು ಬಂಧಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬುಧವಾರ ಪ್ರತಿಭಟನೆ ನಡೆಸಿದರು   

ನಂಜನಗೂಡು: ಜೇನು ತೆಗೆಯಲು ತೆರಳಿದ್ದ ಎಂಟು ಜನ ಯುವಕರನ್ನು ವಶಕ್ಕೆ ಪಡೆದು ಗಂಧದ ಮರ ಕಡಿಯುತ್ತಿದ್ದರು ಎಂಬ ಸುಳ್ಳು ಆರೋಪ ಹೊರಿಸಿರುವ ಅರಣ್ಯಾಧಿಕಾರಿಗಳು, ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬುಧವಾರ 300ಕ್ಕೂ ಹೆಚ್ಚು ಆದಿವಾಸಿಗಳು ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆದಿವಾಸಿಗಳು ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆದಿವಾಸಿಗಳ ಮುಖಂಡ ಚಿಕ್ಕಬೊಮ್ಮ ಮಾತನಾಡಿ, ‘ತಾಲ್ಲೂಕಿನ ಹಾದನೂರು ಒಡೆಯನಪುರ ಬಳಿಯ ಕಾಡಿನೊಳಗೆ ಜೇನು ಹಳಿಯುತ್ತಿದ್ದ ಎಂಟು ಆದಿವಾಸಿ ಯುವಕರನ್ನು ಎಂದು ಸುಳ್ಳು ಆರೋಪ ಹೊರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, 4 ದಿನಗಳ ಹಿಂದೆ ಬಂಧಿಸಿ, ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ನಾಲ್ಕು ಯುವಕರನ್ನು ಬಿಡುಗಡೆ ಮಾಡಿ ಉಳಿದ ನಾಲ್ಕು ಮಂದಿ ಯುವಕರ ಮೇಲೆ ಗಂಧದ ಮರ ಕಡಿಯುತ್ತಿದ್ದರು ಎಂದು ಪ್ರಕರಣ ದಾಖಲಿಸಿದ್ದಾರೆ. ಬಿಡುಗಡೆ ಮಾಡಿದ ಯುವಕರು ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬಾವಿ ಕೆರೆ ಕಾಲೊನಿಯ ಸುರೇಶ್, ಕುಮಾರ, ದಡದಹಳ್ಳಿ ಕಾಲೊನಿಯ ರಾಮು, ನಡಾಡಿ ಕಾಲೊನಿಯ ಕುಮಾರ ಎಂಬ ನಾಲ್ಕು ಜನ ಆದಿವಾಸಿ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಸುಳ್ಳು ಆರೋಪ ಹೊರಿಸಿ, ಆದಿವಾಸಿಗಳಿಗೆ ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ತಪ್ಪು ಮಾಡದ ಆದಿವಾಸಿಗಳ ಮೇಲೆ ಹಲ್ಲೆ ಮಾಡಿ ಪ್ರಕರಣ ದಾಖಲಿಸಿರುವ ಅರಣ್ಯ ಇಲಾಖೆ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾವೇರ, ಕೃಷ್ಣಯ್ಯ, ಚೆಲುವರಾಜು, ಪುಟ್ಟಮ್ಮ, ರಾಜೇಂದ್ರ, ವಿಜಯ್ ಕುಮಾರ್, ಸ್ವಾಮಿ, ಬಸವರಾಜು, ಪುಟ್ಟಬಸವ, ನಟರಾಜು, ರಮೇಶ, ಆಯ್ಯಪ್ಪ ಹಾಗೂ ದಲಿತ ಪರ ಸಂಘಟನೆಗಳ ಮುಖಂಡರು, ಜನಸಂಗ್ರಾಮ ಪರಿಷತ್ತಿನ ಮುಖಂಡರು, ವಿವಿಧ ಹಾಡಿಗಳಿಂದ ಬಂದಿದ್ದ ಆದಿವಾಸಿ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.