ADVERTISEMENT

ರಾಜ್ಯದಲ್ಲಿ ಇಬ್ಬರು ಸಿ.ಎಂ ಸಿದ್ದರಾಮಯ್ಯ ವಾಗ್ದಾಳಿ

ಕೇಂದ್ರದಿಂದ ಎಷ್ಟು ಅನುದಾನ ತರ್ತಾರೆ ನೋಡೋಣ!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 18:51 IST
Last Updated 18 ಸೆಪ್ಟೆಂಬರ್ 2020, 18:51 IST

ಮೈಸೂರು: ‘ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಯಡಿಯೂರಪ್ಪ ಹುದ್ದೆಗಷ್ಟೇ ಸೀಮಿತವಾದರೆ, ಅವರ ಪುತ್ರ ವಿಜಯೇಂದ್ರ ಆಡಳಿತ ನಡೆಸುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಈ ಸರ್ಕಾರ ಸತ್ತು ಹೋಗಿದೆ. ಇನ್ನು, ಸಚಿವರು ಕ್ರಿಯಾಶೀಲರಾಗಿದ್ದಾರಾ, ಇಲ್ಲವಾ ಎಂಬ ಪ್ರಶ್ನೆಯಾದರೂ ಎಲ್ಲಿದೆ? ವಿಧಾನಸಭೆ ಅಧಿವೇಶನದಲ್ಲಿ ಎಲ್ಲವನ್ನೂ ಪ್ರಸ್ತಾಪಿಸುತ್ತೇವೆ. ಪ್ರವಾಹ, ಕೆ.ಜಿ.ಹಳ್ಳಿ–ಡಿ.ಜಿ.ಹಳ್ಳಿ ಗೋಲಿಬಾರ್, ಕೋವಿಡ್‌ ಭ್ರಷ್ಟಾಚಾರ, ಡ್ರಗ್ಸ್‌ ದಂಧೆ ಬಗ್ಗೆ ಪ್ರಶ್ನಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲಿನಿಂದಲೂ ಕರ್ನಾಟಕವನ್ನು ಕಡೆಗಣಿಸುತ್ತಿದೆ. ಜಿಎಸ್‌ಟಿ ಪರಿಹಾರ ಕೇಳಿದರೆ ಸಾಲ ತಗೊಳ್ಳಿ ಅಂತಾರೆ. ಇದಕ್ಕೆ ಯಡಿಯೂರಪ್ಪ, ಕೋಲೆ ಬಸವನ ತರಹ ತಲೆ ಅಲ್ಲಾಡಿಸುತ್ತಿದ್ದಾರೆ’ ಎಂದು ಟೀಕಿಸಿದ ಅವರು, ‘ಕರ್ನಾಟಕಕ್ಕೆ ನ್ಯಾಯ ಸಿಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾಗಿ ಹೇಳಿದರು.

ADVERTISEMENT

‘ಅನುದಾನ ತರ್ತೀನಿ ಅಂತ ನವದೆಹಲಿಗೆ ಹೋಗಿದ್ದಾರೆ. ಎಷ್ಟು ತರ್ತಾರೆ ನೋಡೋಣ!’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಧ್ಯಮದಲ್ಲಷ್ಟೇ ಚರ್ಚೆ:‘ಮುಖ್ಯಮಂತ್ರಿ ಬದಲಾವಣೆಯ ಪ್ರಸ್ತಾಪವೇ ಇಲ್ಲ’ ಎಂದು ಸಚಿವರಾದ ಎಸ್‌.ಸುರೇಶ್‌ಕುಮಾರ್‌ ಮತ್ತು ಎಸ್‌.ಟಿ. ಸೋಮಶೇಖರ್‌ ಹೇಳಿದರು.

‘ಈ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿಲ್ಲ, ಮಾಧ್ಯಮದಲ್ಲಷ್ಟೇ ನಡೆದಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಖಾರವಾಗಿ ಪ್ರತಿಕ್ರಿಯಿಸಿದರೆ, ‘ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ’ ಎಂದು ಸುರೇಶ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.