ADVERTISEMENT

‘ಕೆಎಸ್‌ಒಯುಗೆ ಯುಜಿಸಿಯಿಂದ ಉನ್ನತ ಶ್ರೇಣಿ’

ವಿಶ್ರಾಂತ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹರ್ಷ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 13:51 IST
Last Updated 31 ಜನವರಿ 2022, 13:51 IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ   

ಮೈಸೂರು: ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2018-19ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಯುಜಿಸಿಯಿಂದ ಉನ್ನತ ಶ್ರೇಣಿ ಲಭಿಸಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸೋಮವಾರ ಇಲ್ಲಿ ತಿಳಿಸಿದರು.

‘2018–19ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆಧಾರದ ಮೇಲೆ ಮೌಲ್ಯಮಾಪನ ವರದಿಯನ್ನು 2022ರ ಜ.23ರಂದು ಯುಜಿಸಿ ಪ್ರಕಟಿಸಿದ್ದು, ಈ ಮೌಲ್ಯಮಾಪನ ಸಮೀಕ್ಷೆಯಲ್ಲಿ 400 ಅಂಕಗಳಿಗೆ ಕೆಎಸ್‌ಒಯು 300 ಅಂಕ ಗಳಿಸಿ ಉನ್ನತ ಶ್ರೇಣಿ ಗಳಿಸಿರುವುದು ಹೆಮ್ಮೆಯ ವಿಚಾರ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.

‘ನಾನು ಕೆಎಸ್‌ಒಯು ಕುಲಪತಿಯಾಗಿದ್ದ ಅವಧಿಯದ್ದು ಈ ಸಾಧನೆ. ಈ ಗೌರವಕ್ಕೆ ಆಗಿನ ಎಲ್ಲ ಸಿಬ್ಬಂದಿಯೂ ಕಾರಣ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ’ ಎಂದು ಹೇಳಿದರು.

ADVERTISEMENT

‘ನನ್ನ ಆಡಳಿತದಲ್ಲಿ ವಿ.ವಿ.ಯಲ್ಲಿ ಆರ್ಥಿಕ ಮಿತವ್ಯಯ ಜಾರಿಗೊಳಿಸಿದೆ. ವಿವಿಧ ಘಟಕಗಳ ಸ್ಥಾಪನೆ ಮತ್ತು ಮರುಚಾಲನೆ, ವಿದ್ಯಾರ್ಥಿಗಳ ಕುಂದು ಕೊರತೆ ಪರಿಹಾರ ಕೋಶ ಸೇರಿದಂತೆ ಇನ್ನಿತರೆ ಚಟುವಟಿಕೆ ನಡೆಸಿದ್ದರಿಂದ ಯುಜಿಸಿಯ ಮನ್ನಣೆಗೆ ಭಾಜನರಾಗಿದ್ದೇವೆ’ ಎಂದರು.

‘ಕೆಎಸ್‌ಒಯು ಇತಿಹಾಸದಲ್ಲಿ ಮೊದಲ ಬಾರಿಗೆ ಆನ್‌ಲೈನ್ ಪ್ರವೇಶಾತಿಯನ್ನು 2018ರಿಂದ ಆರಂಭಿಸಲಾಯಿತು. ಆಗ ಅತ್ಯಲ್ಪ ಸಮಯದಲ್ಲೇ 12 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡರು. ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳ ಸಂಬಂಧ ಹೆಚ್ಚಿನ ಒತ್ತು ನೀಡಬೇಕಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತಂದಿದ್ದು, ತುರ್ತಾಗಿ ನ್ಯಾಕ್ (ಎನ್‌ಎಎಸಿ) ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಕೆಎಸ್‌ಒಯು ಮುಂದಾಗಬೇಕು’ ಎಂದು ಶಿವಲಿಂಗಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.