ADVERTISEMENT

ಟಿಆರ್‌ಪಿ ಹೆಚ್ಚಿಸಲು ನಾವೇ ಬೇಕಾ?:ಸುದ್ದಿವಾಹಿನಿಗಳ ಮೇಲೆ ಹರಿಹಾಯ್ದ ಕುಮಾರಸ್ವಾಮಿ

’ನಾವೇನು ಕಾಮಿಡ್‌ ಪೀಸ್‌ಗಳಾ?’

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:47 IST
Last Updated 19 ಮೇ 2019, 19:47 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮೈಸೂರು: ‌ಟಿವಿ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳನ್ನು ನಿಮಗಿಷ್ಟ ಬಂದ ರೀತಿಯಲ್ಲಿ ತೋರಿಸಲು ನಾವೇನು ಕಾಮಿಡ್‌ ಪೀಸ್‌ಗಳಾ? ನಿಮ್ಮ ಟಿಆರ್‌ಪಿ ಹೆಚ್ಚಿಸಲು ನಾವೇ ಬೇಕಾ? ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸುದ್ದಿವಾಹಿನಿಗಳ ಮೇಲಿನ ತಮ್ಮ ಅಸಮಾಧಾನ ಹೊರಹಾಕಿದರು.

ಮೈಸೂರಿನಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ‘ಮಾಧ್ಯಮದವರನ್ನು ಮೆಚ್ಚಿಸಲು ನಾನು ಮುಖ್ಯಮಂತ್ರಿ ಆಗಿಲ್ಲ. ಮಾಧ್ಯಮಗಳ ಮುಂದೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ. ಅವರ ಸಹವಾಸದಿಂದ ಅಪಾಯವಿದೆ ಎಂಬ ಭಾವನೆ ಬಂದುಬಿಟ್ಟಿದೆ’ ಎಂದರು.

ಕೆಲವು ಚಾನೆಲ್‌ಗಳಲ್ಲಿ ‘ಎಲ್ಲಿದ್ದೀಯಪ್ಪಾ ನಿಖಿಲ್‌’ ಎಂದು ಅರ್ಧ ಗಂಟೆ ಕಾರ್ಯಕ್ರಮ ನಡೆಸುತ್ತಾರೆ. ನಿಮ್ಮ ಚಾನೆಲ್‌ ನಡೆಸಿಕೊಳ್ಳಲು ಪ್ರತಿದಿನ ನಾವೇ ಬೇಕಾ? ಚಾನೆಲ್‌ ನಡೆಸಲು ಆಗದಿದ್ದರೆ ಮುಚ್ಚಿಬಿಡಿ. ರಾಜಕಾರಣಿಗಳನ್ನು ಏನೆಂದು ತಿಳಿದುಕೊಂಡಿದ್ದೀರಾ? ಪ್ರತಿಯೊಂದನ್ನೂ ವ್ಯಂಗ್ಯವಾಗಿ ತೋರಿಸಲು ನಿಮಗೆ ಅಧಿಕಾರ ಕೊಟ್ಟದ್ದು ಯಾರು ಎಂದು ಕಿಡಿಕಾರಿದರು.

ADVERTISEMENT

‘ಇಂತಹ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಹಾಕಬೇಕಾಗಿದ್ದು, ಕಾನೂನು ತರಬೇಕಿದೆ. ಕೇವಲ ಊಹಾಪೋಹಗಳ ಮೇಲೆ ಚಾನೆಲ್‌ ನಡೆಸಿಕೊಂಡು ಈ ರಾಜ್ಯವನ್ನು ಹಾಳುಮಾಡಬೇಡಿ ಎಂದು ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗೆ ಕಠಿಣ ಪದಗಳಲ್ಲಿ ಹೇಳುತ್ತೇನೆ. ನಾನು ಮುಖ್ಯಮಂತ್ರಿ ಹುದ್ದೆಯಲ್ಲಿ ಗೂಟ ಹೊಡೆದುಕೊಂಡು ನಿಂತಿದ್ದೇನೆ ಎಂದು ಭಾವಿಸಬೇಡಿ’ ಎಂದರು.

ಪಕ್ಷವನ್ನು ಉಳಿಸಬೇಕಾಗಿತ್ತು: ‘ಮಂಡ್ಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳಲಿಕ್ಕಾಗಿ ನಿಖಿಲ್‌ಗೆ ಟಿಕೆಟ್‌ ನೀಡಲಾಗಿತ್ತು. ಮಗನನ್ನು ನಿಲ್ಲಿಸದಿದ್ದರೆ ಚುನಾವಣೆ ನಡೆಸಲು ಆಗುವುದಿಲ್ಲ ಎಂದು ಅಲ್ಲಿನ ಕಾರ್ಯಕರ್ತರು ಮಾಡಿದ ಒತ್ತಾಯಕ್ಕೆ ಮಣಿದು ಅಂತಹ ನಿರ್ಧಾರ ತೆಗೆದುಕೊಂಡಿದ್ದೆ’ ಎಂದು ಹೇಳಿದರು.

‘ಪ್ರಜಾವಾಣಿ’ ವರದಿಗೆ ಮೆಚ್ಚುಗೆ

ಚಿತ್ರದುರ್ಗ ಜಿಲ್ಲೆಯಲ್ಲಿ ನೀರಿಲ್ಲದೆ ಒಣಗಿದ ಅಡಿಕೆ ತೋಟವನ್ನು ರೈತನೊಬ್ಬ ಕಡಿಸಿ ಹಾಕಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಬಂದ ವರದಿಯನ್ನು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಅಡಿಕೆ ತೋಟ ಕಡಿದು ಹಾಕಿರುವ ಚಿತ್ರ ಪತ್ರಿಕೆಯೊಂದರ ಮುಖಪುಟದಲ್ಲಿ ಪ್ರಕಟವಾಗಿದೆ. ರೈತರ ಬದುಕು ಏನಾಗಿದೆ ಎಂಬುದನ್ನು ಜನರಿಗೆ ತೋರಿಸುವ ಕೆಲಸವನ್ನು ಮಾಧ್ಯಮಗಳು ಮಾಡಲಿ. ನಮ್ಮ ರಾಜಕೀಯ ಜೀವನದ ಸಂಘರ್ಷದ ಬಗ್ಗೆ ಏನೇನೋ ಕತೆ ಕಟ್ಟಿಕೊಂಡು ಪ್ರಸಾರ ಮಾಡುವುದರಿಂದ ಸಮಾಜಕ್ಕೆ ಏನು ಲಾಭ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಹೊಗಳಿದ ವಿಶ್ವನಾಥ್

‘ಸಿದ್ದರಾಮಯ್ಯ 13 ಬಾರಿ ಬಜೆಟ್‌ ಮಂಡಿಸಿದ್ದಾರೆ. ಅವರೇನೂ ಆಕ್ಸ್‌ಫರ್ಡ್‌ ವಿ.ವಿನಲ್ಲಿ ಓದಿಲ್ಲ. ಅವರು ಕೂಡ ರೈತ ಕುಟುಂಬದಿಂದ ಬಂದವರು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಹೊಗಳಿದರು.

ವಿಶ್ವನಾಥ್‌ ಹಾಗೂ ಸಿದ್ದರಾಮಯ್ಯ ನಡುವೆ ಕೆಲದಿನಗಳ ಹಿಂದೆ ಟ್ವಿಟರ್‌ನಲ್ಲಿ ಮಾತಿನ ಸಮರ ನಡೆದಿತ್ತು.

ಮಾಧ್ಯಮದವರ ಬಗ್ಗೆ ಬರೆಯಿರಿ: ‘ಪತ್ರಕರ್ತರು ರಾಜಕಾರಣಿಗಳ ಬಗ್ಗೆ ಮಾತ್ರ ಬರೀತಾರೆ. ಮಾಧ್ಯಮದವರ ಬಗ್ಗೆಯೂ ಬರೆಯಬೇಕು. ಫೋರ್‌ ಟ್ವೆಂಟಿ ಕೆಲಸ ಮಾಡಿ ಹಲವು ಪತ್ರಕರ್ತರು ಜೈಲಿಗೆ ಹೋಗಿದ್ದಾರೆ. ಅದು ಕೂಡ ದಾಖಲಾಗಲಿ. ಹಾಗಾದಲ್ಲಿ ಜನರಿಗೆ ಮಾಧ್ಯಮಗಳ ಮೇಲೆ ನಂಬಿಕೆ ಉಳಿದುಕೊಳ್ಳುತ್ತದೆ’ ಎಂದರು.

‘ಎಚ್‌. ವಿಶ್ವನಾಥ್‌ಗೆ ಏನಾಗಿದೆ ಗೊತ್ತಾಗ್ತಿಲ್ಲ’

ವಿಜಯಪುರ:‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ಗೆ ಏನಾಗಿದೆ ಗೊತ್ತಾಗ್ತಿಲ್ಲ. ನಿತ್ಯವೂ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಏಕೆ ನೀಡುತ್ತಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

’ಮೈತ್ರಿ ಸರ್ಕಾರದ್ದು ಸಮನ್ವಯ ಸಮಿತಿಯಲ್ಲ, ಅದು ಸಿದ್ದರಾಮಯ್ಯ ಸಮಿತಿ’ ಎಂಬ ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು.

‘ತಮ್ಮ ಮನದಿಂಗಿತ, ಸ್ಪಷ್ಟ ಸಂದೇಶವನ್ನು ಜೆಡಿಎಸ್ ಹೈಕಮಾಂಡ್‌ಗೆ ತಿಳಿಸಲಿ. ತಮ್ಮ ಜವಾಬ್ದಾರಿ ಅರಿತು ಮಾತನಾಡಲಿ. ಗೊಂದಲ ಸೃಷ್ಟಿಗಾಗಿ ಹೇಳಿಕೆ ನೀಡುವುದು ಒಳ್ಳೆಯದಲ್ಲ’ ಎಂದು ಭಾನುವಾರ ವಿಜಯಪುರ ತಾಲ್ಲೂಕಿನ ನಾಗಠಾಣದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

‘ಸಮನ್ವಯ ಸಮಿತಿ ಬಗ್ಗೆ ಮಾತನಾಡಬಾರದು. ಈ ಸಮಿತಿ ರಚಿಸಿರುವುದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ,ದೇವೇಗೌಡ. ಈ ಸಮಿತಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ಪ್ರಮುಖರೇ ಸದಸ್ಯರಿದ್ದಾರೆ’ ಎಂದರು.

‘ನಾನು ಇವರೆಲ್ಲರಿಗಿಂತಲೂ ಹಿರಿಯ. ಆದರೂ ನನ್ನ ಇತಿಮಿತಿಯಲ್ಲೇ ಮಾತನಾಡುವೆ. ಇದನ್ನು ಎಲ್ಲರೂ ಪಾಲಿಸಬೇಕು’ ಎಂದು ದೋಸ್ತಿ ಪಕ್ಷಗಳ ಮುಖಂಡರಿಗೆ ದೇಶಪಾಂಡೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.