ADVERTISEMENT

Budget 2024 | ಮೈಸೂರಿಗೆ ನಿರ್ದಿಷ್ಟ ಕೊಡುಗೆಗಳಿಲ್ಲ!

ಕೇಂದ್ರ ಸರ್ಕಾರದಿಂದ 2024–25ನೇ ಸಾಲಿನ ಮಧ್ಯಂತರ ಬಜೆಟ್: ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 5:37 IST
Last Updated 2 ಫೆಬ್ರುವರಿ 2024, 5:37 IST
   

ಮೈಸೂರು: ಕೇಂದ್ರ ಸರ್ಕಾರವು ಮಂಡಿಸಿರುವ 2024–25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಮೈಸೂರಿಗೆ ನಿರ್ದಿಷ್ಟ ಕೊಡುಗೆಗಳನ್ನು ಘೋಷಿಸದಿರುವುದು ನಿರಾಸೆ ಮೂಡಿಸಿದೆ.

ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ನಿಂದ ಮೈಸೂರು ಭಾಗದ ಅಭಿವೃದ್ಧಿಗೆ ವಿಶೇಷ ಕೊಡುಗೆಗಳು, ದೊಡ್ಡ ಪ್ರಮಾಣದಲ್ಲಿ ಅನುದಾನ ದೊರೆಯಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ.

ಮೈಸೂರು–ಕುಶಾಲನಗರ ರೈಲ್ವೆ ಯೋಜನೆ ಸೇರಿದಂತೆ ಹಲವು ಯೋಜನೆಗಳು ಕನಸಾಗಿಯೇ ಉಳಿದಿವೆ. ‘ಜಿ–20 ಶೃಂಗಸಭೆ’ ಆಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ನಡೆದಿದ್ದ ನಗರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಆದರೆ, ಅದರಲ್ಲಿ ಮೈಸೂರಿಗೆ ಆರ್ಥಿಕ ನೆರವು ದೊರೆಯುವುದೇ ಎನ್ನುವುದು ಸ್ಪಷ್ಟವಿಲ್ಲ. ಮೈಸೂರಿನಲ್ಲಿ ‘ಏಮ್ಸ್‌’ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ನಿರಾಶಾದಾಯಕ ಬಜೆಟ್

ರೈತರ ಪಾಲಿಗೆ ನಿರಾಶಾದಾಯಕ ಬಜೆಟ್. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು, ಎಂ.ಎಸ್. ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಜಾರಿಗೆ ತರುವ ಘೋಷಣೆಯಾಗಿಲ್ಲ. ರೈತರ ಸಾಲಮನ್ನಾ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಬೆಳೆ ವಿಮೆ ಪದ್ಧತಿ ಬದಲಾವಣೆ ಬಗ್ಗೆ ಪ್ರಸ್ತಾಪಿಸಿಲ್ಲ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡುತ್ತೇವೆ.

ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಯುವಶಕ್ತಿ ಸದೃಢಕ್ಕೆ ಸಹಕಾರಿ

ಅಂಗನವಾಡಿಗಳ ಉನ್ನತೀಕರಣ, ದೇಶದೆಲ್ಲೆಡೆ ಹೊಸ ಐಐಟಿ, ಐಐಎಂ, ಐಐಐಟಿ, ಏಮ್ಸ್‌ನಂತಹ 45 ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ 390 ವಿಶ್ವವಿದ್ಯಾಲಯಗಳನ್ನು ಆರಂಭಿಸಿರುವುದು ಯುವ ಶಕ್ತಿಯನ್ನು ಶೈಕ್ಷಣಿಕವಾಗಿ ಸದೃಢಗೊಳಿಸಲು ಸಹಕಾರಿಯಾಗಿದೆ.

ಪ್ರೊ.ಬಿ. ಸದಾಶಿವೇಗೌಡ, ಪ್ರಾಂಶುಪಾಲ, ವಿದ್ಯಾವರ್ಧಕ ತಾಂತ್ರಿಕ ಕಾಲೇಜು

ಶಿಕ್ಷಣ ಕ್ಷೇತ್ರಕ್ಕೆ ಹಂಚಿಕೆ ತೋರಿಕೆಯಷ್ಟೆ

ಇದು ಮಧ್ಯಂತರ ಬಜೆಟ್ ಆಗಿದ್ದರೂ, ಹಣಕಾಸು ಸಚಿವರು ಹತ್ತು ವರ್ಷಗಳ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನಷ್ಟೆ ಪಟ್ಟಿ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಂಚಿಕೆ ಕೇವಲ ತೋರಿಕೆಯಾಗಿದೆ. ರಾಜ್ಯಕ್ಕೆ ಏಮ್ಸ್ ಬಗ್ಗೆ ಪ್ರಸ್ತಾಪವಿಲ್ಲ.

ಚಂದ್ರಕಲಾ, ಎಐಡಿಎಸ್‌ಒ ಜಿಲ್ಲಾ ಸಮಿತಿ ಕಾರ್ಯದರ್ಶಿ

ಲಕ್‌ಪತಿ ದೀದಿ’ ಸಹಕಾರಿ

ಹಿಂದಿನ ಬಜೆಟ್‌ಗೆ ಹೋಲಿಸಿದರೆ ಶೇ 5.7ರಿಂದ ಶೇ 5.1ಕ್ಕೆ ವಿತ್ತೀಯ ಕೊರತೆ ಇಳಿಸಿದ್ದಾರೆ. ‘ಲಕ್‌ಪತಿ ದೀದಿ’ ಕಾರ್ಯಕ್ರಮವು ಮಹಿಳೆಯರಿಗೆ ಅನುಕೂಲಕರವಾಗಿದೆ. ರೈಲ್ವೆ ಯೋಜನೆಗಳಿಗೆ ಅನುದಾನ, ಮೈಸೂರಿನಲ್ಲಿ ಕೈಗಾರಿಕಾ ಕಾರಿಡಾರ್‌ ನಿರೀಕ್ಷೆ ಇತ್ತು. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಈ ಬಾರಿಯೂ ಸಿಕ್ಕಿಲ್ಲ.

ಎಚ್‌.ಆರ್. ಪವಿತ್ರಾ, ಸಹಾಯಕ ಪ್ರಾಧ್ಯಾಪಕಿ, ಅರ್ಥಶಾಸ್ತ್ರ ವಿಭಾಗ, ಮಾನಸಗಂಗೋತ್ರಿ

ಜನರಿಗೆ ಪ್ರಯೋಜನವಿಲ್ಲ

ನುಡಿದಂತೆ ನಡೆಯದ ಕೇಂದ್ರದ ಬಜೆಟ್‌ನ ಘೋಷಣೆಗಳಿಂದ ಜನರಿಗೆ ಪ್ರಯೋಜನವಿಲ್ಲ. ಕಾರ್ಪೊರೇಟ್ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಚುನಾವಣೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ಘೋಷಿಸಿದೆ. ಅವು ಕೂಡ ₹20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ರೀತಿಯ ಸುಳ್ಳುಗಳ ಸರಮಾಲೆಯೇ ಆಗಿದೆ.

ಡಾ.ಎಚ್‌.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ರಾಮರಾಜ್ಯ ಸೂಚಕ ಬಜೆಟ್

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ 300 ಯೂನಿಟ್ ವಿದ್ಯುತ್ ಯೋಜನೆ, ವಿಮಾನ ಮಾರ್ಗಗಳ ಅಭಿವೃದ್ಧಿ, ಸಾವಿರ ವಿಮಾನಗಳ ಖರೀದಿ, ಲಕ್‌ಪತಿ ದೀದಿ ಯೋಜನೆ, ಇಂದ್ರಧನುಷ್, ಆಯಿಲ್‌ಸೀಡ್ ಅಭಿಯಾನ, ಸಂಶೋಧನೆಗೆ ಅನುದಾನ, ರಾಜ್ಯಗಳಿಗೆ ₹5 ಸಾವಿರ ಕೋಟಿ ಸಾಲ, ಸೋಲಾರ್ ಕ್ಷೇತ್ರದಲ್ಲಿ ಆವಿಷ್ಕಾರ, ಮಹಿಳೆಯರು ಹಾಗೂ ರೈತರ ಯೋಜನೆಗಳಿಗೆ ಹಣ ಹೊಂದಾಣಿಕೆಯು ಅಂಬೇಡ್ಕರ್ ಮತ್ತು ಗಾಂಧೀಜಿ ಆಶಯದ ರಾಮರಾಜ್ಯದ ಜಾರಿಯ ಸೂಚಕವಾಗಿದೆ.

ಸುಧಾಕರ ಹೊಸಳ್ಳಿ, ಚಿಂತಕ

ತೆರಿಗೆ ಹೇರದೇ ಸೌಕರ್ಯಕ್ಕೆ ಆದ್ಯತೆ

ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹಾಕದೇ ಸೌಕರ್ಯಗಳ ಅಭಿವೃದ್ಧಿಯ ಕಡೆ ಹೆಚ್ಚಿನ ಗಮನ ನೀಡಲಾಗಿದೆ. ಇದೊಂದು ಆರ್ಥಿಕ ವ್ಯವಸ್ಥೆಯ ಪೂರಕ ಬಜೆಟ್. ಮೂಲಸೌಕರ್ಯ ಅಭಿವೃದ್ಧಿಯಿಂದ ವಿಪುಲ ಉದ್ಯೋಗಾವಕಾಶ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

ಕೆ.ಬಿ. ಲಿಂಗರಾಜು, ಅಧ್ಯಕ್ಷ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಬಡತನ ಹೆಚ್ಚಿಸುವ ಬಜೆಟ್

ಆಡಳಿತ ನಡೆಸಲಿಕ್ಕಾಗಿ ಮತ್ತೆ ₹25 ಲಕ್ಷ ಕೋಟಿ ಹೊಸ ಸಾಲ ಪಡೆಯಲು ‌ಪ್ರಧಾನಿ ಮತ್ತು ಹಣಕಾಸು ಸಚಿವರು ಮುಂದಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಸಹಜ ಬದಲಾವಣೆಗಳನ್ನೇ ಸಾಧನೆಗಳೆಂದು ಬಿಂಬಿಸಿ ವಿತ್ತ ಸಚಿವರು ಬೆನ್ನು ತಟ್ಟಿಕೊಂಡಿದ್ದಾರೆ. ಬಡವರನ್ನು ಇನ್ನೂ ಬಡವರನ್ನಾಗಿಸುವ ಬಜೆಟ್.

ಎಚ್.ಎ. ವೆಂಕಟೇಶ್, ವಕ್ತಾರ, ಕೆಪಿಸಿಸಿ

ಅರೆಬೆಂದ, ರುಚಿ ರಹಿತ ಬಜೆಟ್

ಚುನಾವಣೆ ಹೊಸ್ತಿಲಲ್ಲಿ ಮಂಡನೆಯಾದ ಬಜೆಟ್‌ ನಿರಾಶಾದಾಯಕ ಮತ್ತು ಉಳ್ಳವರ ಹೊಟ್ಟೆ ತುಂಬಿಸುವುದಷ್ಟೇ ಆಗಿದೆ. ಖಾಲಿ, ಅರೆ ಬೆಂದ ಹಾಗೂ ರುಚಿ ರಹಿತವಾಗಿದೆ. 

ಎಂ.ಕೆ. ಸೋಮಶೇಖರ್, ಮಾಜಿ ಶಾಸಕ

ಕೃಷಿ–ಕೃಷಿಕರ ಮೇಲೆತ್ತುವ ಕಾರ್ಯಕ್ರಮವಿಲ್ಲ

ಈ ಬಜೆಟ್ ಕೇವಲ ಲೇಖಾನುಧನವಾಗಿದೆ. ಕೃಷಿ–ಕೃಷಿಕರನ್ನು ಮೇಲೆತ್ತುವ ಸ್ಪಷ್ಟ ಕಾರ್ಯಕ್ರಮವಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲೇ ಇಲ್ಲ. ಚುನಾವಣೆಗೆ ರಾಮ ಜಪ ಮಾತ್ರ, ಜನರಿಗೆ ಯಾವುದೇ ಕಾರ್ಯಕ್ರಮ ಹೇಳಬೇಕಿಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಂತಿದೆ.

ಬಡಗಲಪುರ ನಾಗೇಂದ್ರ, ಅಧ್ಯಕ್ಷ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.