
ಮೈಸೂರು: ಸೋಮವಾರದಿಂದ (ನ.24) ಮೈಸೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆಗಳು ಆರಂಭ ಆಗಲಿವೆ. ಈ ಬಾರಿ ಪ್ರಶ್ನೆಪತ್ರಿಕೆಯನ್ನು ಒಯ್ಯುವ, ಉತ್ತರಪತ್ರಿಕೆಗಳನ್ನು ವಾಪಸ್ ತಲುಪಿಸುವ ಜವಾಬ್ದಾರಿಯನ್ನು ಆಯಾ ಕಾಲೇಜುಗಳಿಗೇ ಹೊರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ಹಿಂದೆ ತಾಲ್ಲೂಕು ಮಟ್ಟದಲ್ಲಿ ಖಜಾನೆಯಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಇಡಲಾಗುತ್ತಿತ್ತು. ಇಲ್ಲವೇ ಪರೀಕ್ಷೆ ದಿನದಂದು ಮೈಸೂರು ವಿ.ವಿ.ಯೇ ಪ್ರಶ್ನೆಪತ್ರಿಕೆ ತಲುಪಿಸುತ್ತಿತ್ತು. ಆದರೆ ಈಗ ಪ್ರಶ್ನೆಪತ್ರಿಕೆಯನ್ನು ಆಯಾ ಕಾಲೇಜುಗಳ ಮುಖ್ಯಸ್ಥರು ಇಲ್ಲವೇ ಸಿಬ್ಬಂದಿಯೇ ವಿಶ್ವವಿದ್ಯಾಲಯದ ಕಚೇರಿಯಿಂದ ಪಡೆದು ನಂತರದಲ್ಲಿ ಉತ್ತರ ಪತ್ರಿಕೆಗಳನ್ನು ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕಿದೆ.
ಈ ಕುರಿತು ಮೈಸೂರು ವಿಶ್ವವಿದ್ಯಾಲಯವು ಈಚೆಗಷ್ಟೇ ಆದೇಶ ಹೊರಡಿಸಿದ್ದು, ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿದೆ. ಖುದ್ದಾಗಿ ಇಲ್ಲವೇ ಸಿಬ್ಬಂದಿ ಮೂಲಕ ಕ್ರಾಫರ್ಡ್ ಭವನದಿಂದ ಪ್ರಶ್ನೆಪತ್ರಿಕೆ ಹಾಗೂ ಖಾಲಿ ಉತ್ತರಪತ್ರಿಕೆಗಳನ್ನು ಒಯ್ದು, ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನು ಮರಳಿ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕಿದೆ.
ಗುಣಮಟ್ಟದ ಆತಂಕ: ‘ವಿಶ್ವವಿದ್ಯಾಲಯದ ಈ ಕ್ರಮವು ಪರೀಕ್ಷೆ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ. ಅಕ್ರಮಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆ’ ಎನ್ನುವುದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಆತಂಕವಾಗಿದೆ.
‘ಒಂದು ವೇಳೆ ಪ್ರಶ್ನೆಪತ್ರಿಕೆ ರವಾನೆಯ ಸಂದರ್ಭ ಅಥವಾ ಉತ್ತರಪತ್ರಿಕೆಗಳ ವಾಪಸ್ ಸಂದರ್ಭ ಏನಾದರೂ ತೊಂದರೆ ಆದಲ್ಲಿ ಅದು ಇಡೀ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯತೆಯನ್ನು ತಳ್ಳಿಹಾಕುವಂತೆ ಇಲ್ಲ. ಹೀಗಾಗಿ ಹಿಂದಿನ ಅವಧಿಯಲ್ಲಿ ಇದ್ದಂತೆಯೇ ವಿಶ್ವವಿದ್ಯಾಲಯವೇ ಪರೀಕ್ಷೆ ದಿನದಂದು ಆಯಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಿಸುವ, ಉತ್ತರ ಪತ್ರಿಕೆ ವಾಪಸ್ ಪಡೆಯುವ ಕಾರ್ಯ ಮಾಡಬೇಕು. ವೆಚ್ಚ ಕಡಿತದ ನೆಪದಲ್ಲಿ ಪರ್ಯಾಯ ಕ್ರಮಗಳತ್ತ ಮುಖ ಮಾಡಿದರೆ ಅದು ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು’ ಎಂದು ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ಆತಂಕ ವ್ಯಕ್ತಪಡಿಸುತ್ತಾರೆ.
ಬದಲಾವಣೆಯತ್ತ ಚಿತ್ತ: ‘ವಿಶ್ವವಿದ್ಯಾಲಯದ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆಯೇ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಪರೀಕ್ಷಾ ಸಾಮಗ್ರಿಯ ಹೊಣೆಗಾರಿಕೆಯನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡುವ ನಿರ್ಧಾರವನ್ನು ಈ ವರ್ಷ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ’ ಎನ್ನುತ್ತಾರೆ ಮೈಸೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ನಾಗರಾಜು.
‘ಕಾಲಮಾನಕ್ಕೆ ತಕ್ಕಂತೆ ಕೆಲವು ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಇದರಿಂದ ಯಾವ ರೀತಿಯ ಅಕ್ರಮವೂ ಆಗದು. ವಿದ್ಯಾರ್ಥಿಗಳಿಗೂ ತೊಂದರೆ ಆಗದು’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.