ಮೈಸೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ಕಳೆದ ದಶಕಗಳಲ್ಲಿ ನಡೆದ ‘ಅಸಹಜ ಸಾವುಗಳು’ ಎಂಬ ಹಣೆಪಟ್ಟಿ ಹೊತ್ತ ಪ್ರಕರಣಗಳ ಬಗ್ಗೆ ಮರು ತನಿಖೆ ನಡೆಸಿ ಸತ್ಯವನ್ನು ಹೊರಗೆಳೆಯಬೇಕು’ ಎಂದು ಸಿಪಿಐ (ಎಂ) ಒತ್ತಾಯಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಜಗದೀಶ್ ಸೂರ್ಯ, ‘ಧರ್ಮಸ್ಥಳ ಮಂಜುನಾಥ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ನಾನು ಹಲವು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬ ಪೋಲಿಸರು ಮತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ. ಇದು ಇಡೀ ಪ್ರಕರಣದಲ್ಲಿ ಈ ಮೊದಲೇ ಸಾಮಾಜಿಕ ಕಳಕಳಿಯ ಸಂಘಟನೆಗಳು, ವ್ಯಕ್ತಿಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರವಾಗಿದೆ. ಆದರೆ, ಸಾಕ್ಷಿ ದೂರುದಾರನ ಹೇಳಿಕೆಯ ನಂತರ ಕ್ಷಿಪ್ರಗತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ’ ಎಂದು ಹೇಳಿದ್ದಾರೆ.
‘ಪ್ರಕರಣದ ಸರಿಯಾದ ತನಿಖೆಗೆ ಆಸಕ್ತಿ ತೋರಿಸದೆ, ದೂರುದಾರರ ಮಂಪರು ಪರೀಕ್ಷೆಗೆ ಅನುಮತಿ ಕೋರುವುದಾಗಿ ಪೊಲೀಸರು ಹೇಳುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ. ಇವು ಪ್ರಾರಂಭದಿಂದಲೂ ಯಾರನ್ನೋ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎದ್ದಿರುವ ಅನುಮಾನಗಳನ್ನು ದೃಢಪಡಿಸುತ್ತಿವೆ’ ಎಂದು ದೂರಿದ್ದಾರೆ.
‘ಸೌಜನ್ಯ ಪ್ರಕರಣವೂ ಸೇರಿದಂತೆ ಅಸಹಜವೆಂದು ಪರಿಗಣಿಸಿ ಮೂಲೆಗೆ ತಳ್ಳಲಾದ ಎಲ್ಲ ಪ್ರಕರಣಗಳ ಬಗ್ಗೆಯೂ ನ್ಯಾಯಾಲಯದ ಸುಪರ್ದಿಯಲ್ಲಿ ಮರು ತನಿಖೆ ನಡೆಸಬೇಕು. ತನಿಖೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆದು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು. ಸಿಬಿಐ ನ್ಯಾಯಾಲಯದ ಆದೇಶದಂತೆ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ಕಾರಣರಾದ ಮತ್ತು ತನಿಖೆಯನ್ನು ದಾರಿ ತಪ್ಪಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.