ADVERTISEMENT

ಮೈಸೂರು ವಿ.ವಿ ಸಿಂಡಿಕೇಟ್‌: ಸದಸ್ಯರ ನೇಮಕದಲ್ಲಿ ಗೊಂದಲ

ಒಮ್ಮೆ ಸಿಂಡಿಕೇಟ್ ಸದಸ್ಯರಾಗಿದ್ದವರನ್ನೇ ಮತ್ತೆ ನೇಮಕ ಮಾಡಲಾಗಿದೆ ಎಂಬ ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:45 IST
Last Updated 14 ಡಿಸೆಂಬರ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ ನೂತನ ಸಿಂಡಿಕೇಟ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಅಪಸ್ವರ ಕೇಳಿಬಂದಿದೆ.

ಒಮ್ಮೆ ಸಿಂಡಿಕೇಟ್‌ ಸದಸ್ಯರಾದವರನ್ನು ಮತ್ತೆ ನೇಮಿಸಬಾರದು’ ಎಂದು ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000’ದಲ್ಲಿ ಇದ್ದರೂ, ನಿಯಮವನ್ನು ಮುರಿದು ಸದಸ್ಯರನ್ನು ನೇಮಿಸಲಾಗಿದೆ’ ಎಂದು ವಿ.ವಿ.ಯ ಹಾಲಿ ಸಿಂಡಿಕೇಟ್‌ ಸದಸ್ಯರೇ ದೂರಿದ್ದಾರೆ.

ಈಚೆಗಷ್ಟೇ ಸರ್ಕಾರವು ಚಾಮರಾಜನಗರದ ಪ್ರದೀಪ್ ಕುಮಾರ್‌ ದೀಕ್ಷಿತ್, ಮಂಡ್ಯದ ಪ್ರೊ.ದೊಡ್ಡಾಚಾರಿ (ಸಾಮಾನ್ಯ), ಈ.ಸಿ.ನಿಂಗರಾಜ ಗೌಡ (ಹಿಂದುಳಿದ ವರ್ಗ), ಮೈಸೂರಿನ ಸಿಂಧು ಸುರೇಶ್‌ (ಮಹಿಳೆ), ಹಾಸನದ ಡಾ.ದಾಮೋದರ (ಪರಶಿಷ್ಟ ಪಂಗಡ), ಬೆಂಗಳೂರಿನ ಡಾ.ಸೈಯದ್ ಕಾಝಾ ಮೊಹಿದ್ದೀನ್‌ (ಅಲ್ಪಸಂಖ್ಯಾತ) ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇವರ ಪೈಕಿ ಸಿಂಧು ಸುರೇಶ್‌ ಅವರು 2002ರಲ್ಲಿ ಪ್ರೊ.ಜೆ.ಶಶಿಧರ ಪ್ರಸಾದ್‌ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು ಎನ್ನುವುದು ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಗೊಂದಲ: 2002ರಲ್ಲಿ ಸಿಂಧು ಅವರು ನೇಮಕವಾಗಿದ್ದಾಗ ವಿದ್ಯಾರ್ಹತೆಯನ್ನು ಎಲ್ಎಲ್‌ಬಿ ಎಂದು ನಮೂದಿಸಲಾಗಿತ್ತು. ಇದೀಗ ಹೊರಡಿಸಿರುವ ಆದೇಶದಲ್ಲಿ ಎಂಎಸ್ಸಿ, ಪಿಎಚ್ಡಿ ಎಂದು ನಮೂದಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಂಧು, ‘ನಾನು ಈ ಮೊದಲು ಸಿಂಡಿಕೇಟ್ ಸದಸ್ಯಳಾಗಿದ್ದದ್ದು ಹೌದು. ರಾಜ್ಯ ಸರ್ಕಾರವು ಕಾನೂನು ಅಭಿಪ್ರಾಯ ಕೇಳಿಯೇ ನನ್ನನ್ನು ನಾಮನಿರ್ದೇಶನ ಮಾಡಿದೆ. ಅಲ್ಲದೇ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಇದೇ ರೀತಿ ನೇಮಕವಾಗಿರುವ ಉದಾಹರಣೆಯಿವೆ’ ಎಂದರು.

ಶಿಕ್ಷಣ ತಜ್ಞರೊಬ್ಬರು ಈ ಕುರಿತು ಪ್ರತಿಕ್ರಿಯಿಸಿ, ‘ಕಾಯ್ದೆಯಲ್ಲಿ ಮರು ನೇಮಕಕ್ಕೆ ಅವಕಾಶವಿಲ್ಲ ಎನ್ನುವುದು ಸತ್ಯ. ವಿಶ್ವವಿದ್ಯಾಲಯದ ಯಾವುದೇ ಮಂಡಳಿಗೆ ಒಮ್ಮೆ ನೇಮಕವಾದರೆ ಅದೇ ಸ್ಥಾನಕ್ಕೆ ಮತ್ತೆ ನೇಮಕ ಆಗುವಂತಿಲ್ಲ ಎಂದು ಕಾಯ್ದೆ ಹೇಳುತ್ತದೆ. ಅದು ಶೈಕ್ಷಣಿಕ ಮಂಡಳಿ ಸದಸ್ಯರು ಹಾಗೂ ಸಿಂಡಿಕೇಟ್‌ ಸದಸ್ಯರಿಗೂ ಅನ್ವಯಿಸುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.