ಜಯಲಕ್ಷ್ಮಿವಿಲಾಸ ಅರಮನೆಯ ಸಂರಕ್ಷಣೆ ಕಾರ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹಾಗೂ ಚೆನ್ನೈನ ಯುಎಸ್ ಕಾನ್ಸಲ್ ಜನರಲ್‌ನ ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್ ಪ್ರದರ್ಶಿಸಿದರು.
ಮೈಸೂರು: ಇಲ್ಲಿನ ಮಾನಸ ಗಂಗೋತ್ರಿಯಲ್ಲಿರುವ ಪಾರಂಪರಿಕ ಕಟ್ಟಡವಾದ ‘ಜಯಲಕ್ಷ್ಮಿವಿಲಾಸ ಅರಮನೆ’ಯ ಸಂರಕ್ಷಣೆಗೆ ಅಮೆರಿಕ ಸರ್ಕಾರ ಮತ್ತು ಮುಂಬೈನ ಹರೀಶ್– ಬೀನಾ ಶಾ ಫೌಂಡೇಷನ್ ಆರ್ಥಿಕ ಬೆಂಬಲ ಘೋಷಿಸಿವೆ.
‘ಅಮೆರಿಕ ಸರ್ಕಾರದ ಎಎಫ್‌ಸಿಪಿ (ಅಂಬಾಸಿಡರ್ಸ್ ಫಂಡ್ ಫಾರ್ ಕಲ್ಚರಲ್ ಪ್ರಿಸರ್ವೇಷನ್) ಮೂಲಕ ₹ 2.49 ಕೋಟಿ ಧನಸಹಾಯ ನೀಡಲಾಗಿದೆ. ಅರಮನೆಯ ಜಾನಪದ ವಸ್ತುಸಂಗ್ರಹಾಲಯ ಕಟ್ಟಡದ ಪಶ್ಚಿಮ ಭಾಗ ಮತ್ತು ಅಲ್ಲಿರುವ 6,500ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಅನುದಾನ ಬಳಸಲಾಗುವುದು’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವಿಶ್ವವಿದ್ಯಾಲಯವು ‘ಡೆಕ್ಕನ್ ಹೆರಿಟೇಜ್ ಫೌಂಡೇಷನ್’ (ಡಿಎಚ್‌ಎಫ್) ಸಹಭಾಗಿತ್ವದಲ್ಲಿ ಪುನಶ್ಚೇತನ ಹಾಗೂ ಸಂರಕ್ಷಣಾ ಪ್ರಯತ್ನಗಳನ್ನು ಮಾಡುತ್ತಿದೆ. ವರ್ಷದಿಂದ ಕಾಮಗಾರಿ ನಡೆದಿದ್ದು, 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಲಾಕೃತಿಗಳ ಡಿಜಿಟಲೀಕರಣವೂ ನಡೆಯಲಿದೆ. ತೀವ್ರ ಶಿಥಿಲಗೊಂಡಿರುವ ಕಟ್ಟಡವನ್ನು ತುರ್ತಾಗಿ ಉಳಿಸಿಕೊಳ್ಳಬೇಕಾಗಿರುವುದರಿಂದ ಸಹಭಾಗಿತ್ವಕ್ಕಾಗಿ ಅಮೆರಿಕ ರಾಯಭಾರಿ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು’ ಎಂದರು.
‘14ಸಾವಿರಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆಂದು ವಿ.ವಿಯ ಅಧಿಕಾರಿಗಳೊಂದಿಗೆ, ಪರಿಣತರಾದ ಜೆ.ರಂಗನಾಥ್, ಅರುಣ್ ಮೆನನ್, ಶ್ರೀಕುಮಾರ್ ಮೆನನ್, ಸ್ಕಾಟ್ ಇ. ಹ್ಯಾಟ್‌ಮನ್, ಪ್ರೊ.ನರೇಂದ್ರ, ಶರತ್ ಚಂದ್ರ ಅವರುಳ್ಳ ಸಮಿತಿ ರಚಿಸಲಾಗಿದೆ’ ಎಂದರು.
ಸ್ನೇಹ–ಗೌರವಕ್ಕೆ ಸಾಕ್ಷಿ:
ಅನುದಾನ ಘೋಷಿಸಿದ ಚೆನ್ನೈನ ಯುಎಸ್ ಕಾನ್ಸಲ್ ಜನರಲ್‌ನ ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್ ಮಾತನಾಡಿ, ‘ಭಾರತದ ಜನ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತು ಅಮೆರಿಕವು ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಸಾಕ್ಷಿಯಾಗಿ ಬೆಂಬಲ ನೀಡಲಾಗಿದೆ. ಅರಮನೆಯು ಮುಂದಿನ ಪೀಳಿಗೆಯ ಭಾರತೀಯರು ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲಿದೆ’ ಎಂದರು.
‘ಎರಡು ದಶಕದಲ್ಲಿ ಭಾರತದಲ್ಲಿ 2ನೇ ಅತಿ ಹೆಚ್ಚು ಪ್ರಮಾಣದ ಅನುದಾನವನ್ನು ಮೈಸೂರಿಗೆ ನೀಡಿರುವುದು ವಿಶೇಷ. ಅಮೆರಿಕ ಸರ್ಕಾರವು ಜಾಗತಿಕವಾಗಿ ಇಂತಹ 30ರಿಂದ 40 ಯೋಜನೆಗಳನ್ನು ಕೈಗೆತ್ತಿಕೊಂಡಿದೆ’ ಎಂದರು.
ಡಿಎಚ್‌ಎಫ್ ಇಂಡಿಯಾದ ಅಧ್ಯಕ್ಷೆ ಲತಾ ರೆಡ್ಡಿ, ಕುಲಸಚಿವೆ ವಿ.ಎಸ್. ಶೈಲಜಾ, ಹಣಕಾಸು ಅಧಿಕಾರಿ ರೇಖಾ ಕೆ.ಎಸ್. ಪಾಲ್ಗೊಂಡಿದ್ದರು.
ಅಲ್ಲಿ ಜಾಗ ಕೊಡಲಾಗದು: ಕುಲಪತಿ
‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪನೆಗೆ ಜಯಲಕ್ಷ್ಮಿವಿಲಾಸ ಅರಮನೆಯಲ್ಲಿ ಜಾಗ ನೀಡಲಾಗಿತ್ತು. ಆದರೆ ವರ್ಷದಿಂದ ಬಳಸಿಕೊಳ್ಳಲಿಲ್ಲ. ಈಗ ನವೀಕರಣ ಕಾರ್ಯ ನಡೆಯಬೇಕಿರುವುದರಿಂದ ಸ್ಥಳಾವಕಾಶ ಒದಗಿಸಲಾಗುವುದಿಲ್ಲ’ ಎಂದು ಕುಲಪತಿ ಲೋಕನಾಥ ಸ್ಪಷ್ಟಪಡಿಸಿದರು. ‘ಅರಮನೆಯ ಕಟ್ಟಡ ಸಂರಕ್ಷಣೆಗೆ ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭರಿಸಲು ಸಾಧ್ಯವಾಗದೇ ಇರುವುದರಿಂದ ನಾವು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಯಿತು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಗಂಗೋತ್ರಿಯಲ್ಲೇ ಜಾಗ ನೀಡಿದ್ದೇವೆ’ ಎಂದು ತಿಳಿಸಿದರು.
‘₹ 30 ಕೋಟಿಯ ಯೋಜನೆ’
‘ಅರಮನೆಯ ಕಟ್ಟಡದ ಇತರ ಭಾಗವನ್ನು ಸಂರಕ್ಷಿಸಲು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಉದ್ಯಮಿ ಹರೀಶ್ ಶಾ ನೇತೃತ್ವದ ಹರೀಶ್–ಬೀನಾ ಶಾ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಕುಲಪತಿ ಲೋಕನಾಥ್ ವಿವರ ನೀಡಿದರು. ‘ಯೋಜನಾ ಮೊತ್ತ ₹ 30 ಕೋಟಿ ಆಗಿದ್ದು ಹಂತ ಹಂತವಾಗಿ ಒದಗಿಸಲಾಗುವುದು ಎಂದು ಹರೀಶ್ ಸಮ್ಮತಿಸಿದ್ದಾರೆ. ಕಾಮಗಾರಿಯು ಭೌತಿಕವಾಗಿ ಇನ್ನಷ್ಟೇ ಆರಂಭವಾಗಬೇಕಿದೆ. ಹಂತ ಹಂತವಾಗಿ ನಡೆಯಲಿದ್ದು ಪುನರುಜ್ಜೀವನಕ್ಕೆ 5ರಿಂದ 7 ವರ್ಷ ಬೇಕಾಗುತ್ತದೆ. ಇದಕ್ಕಾಗಿ ಪರಂಪರೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ’ ಎಂದರು. ‘ಮಣಿಪಾಲ್ ತಾಂತ್ರಿಕ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿದ್ದಾಗ ನಾನು ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ಈ ವಿವಿಯ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣೆಗೆ ಕೈಜೋಡಿಸಿರುವುದು ಖುಷಿ ನೀಡಿದೆ. ಇದು ಮೈಸೂರಿನ ಹೆಗ್ಗುರುತಾಗಿ ಸಿದ್ಧಗೊಳ್ಳಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.