ADVERTISEMENT

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ

‘ಜೈಲಿಗೆ ಹೋಗಿ ಬಂದರೂ ಬುದ್ದಿ ಬಂದಿಲ್ಲ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 16:57 IST
Last Updated 26 ಅಕ್ಟೋಬರ್ 2020, 16:57 IST
ವಾಟಾಳ್‌ ನಾಗರಾಜ್‌
ವಾಟಾಳ್‌ ನಾಗರಾಜ್‌   

ಮೈಸೂರು: ‘ಜೈಲಿಗೆ ಹೋಗಿ ಬಂದರೂ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಾರೋಟಿನಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಸಲು ಅವಕಾಶ ನೀಡದಿದ್ದಕ್ಕೆ ಮುಖ್ಯಮಂತ್ರಿ, ಪೊಲೀಸರ ವಿರುದ್ಧವೂ ವಾಟಾಳ್ ಹರಿಹಾಯ್ದರು. ಅರಮನೆ ಪ್ರವೇಶಕ್ಕೆ ಮುಂದಾದ ವಾಟಾಳ್‌ರನ್ನು ಪೊಲೀಸರು ವಶಕ್ಕೆ ಪಡೆದು, ಕೆಲಹೊತ್ತಿನ ನಂತರ ಬಿಡುಗಡೆಗೊಳಿಸಿದರು.

‘ದರ್ಪ, ದುರಂಹಕಾರ, ದ್ವೇಷ ಬಿಡಿ. ಚಾಡಿ ಮಾತು ಕೇಳಿ ಚಾಮುಂಡೇಶ್ವರಿಯ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ಅರಮನೆಯ ಸುತ್ತಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಜಂಬೂಸವಾರಿ ಮಾಡುತ್ತಿದ್ದೀರಿ. ಪೊಲೀಸ್ ರಾಜ್ಯವಾಗಿದೆ ನಿಮ್ಮ ಆಡಳಿತ’ ಎಂದು ಮಾಧ್ಯಮದವರ ಬಳಿ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

ADVERTISEMENT

‘ನೀವು ಅಧಿಕಾರದಿಂದ ಕೆಳಗಿಳಿದ ತಕ್ಷಣವೇ ಬೀದಿ ನಾಯಿಯೂ ನಿಮ್ಮನ್ನು ಕೇಳಲ್ಲ. ನಮ್ಮ ಮೆರವಣಿಗೆಗೆ ಅವಕಾಶ ಕೊಡಬೇಕಿತ್ತು. ಸಾರ್ವಜನಿಕವಾಗಿ ಚಾಮುಂಡೇಶ್ವರಿಯ ಮೆರವಣಿಗೆಗೆ ಅವಕಾಶ ಕೊಡದಿದ್ದು ಖಂಡನಾರ್ಹ’ ಎಂದು ಹರಿಹಾಯ್ದರು.

‘ಆಡಳಿತದಲ್ಲಿ ಹುಡುಗಾಟ ಆಡುತ್ತಿದ್ದೀರಿ. ₹ 15 ಕೋಟಿ ವೆಚ್ಚದಲ್ಲಿ ದಸರಾ ಆಚರಿಸುತ್ತಿದ್ದೀರಿ. ಇನ್ನೊಂದೆಡೆ ವೆಂಟಿಲೇಟರ್, ಮಂಚ, ಹಾಸಿಗೆ ಇಲ್ಲದೆ ಜನರು ಕೋವಿಡ್‌ನಿಂದ ಸಾಯುತ್ತಿದ್ದಾರೆ. ಕೋವಿಡ್ ನಿಯಂತ್ರಿಸುವಲ್ಲಿ ವಿಫಲರಾದ ನಿಮಗೆ, ರಾಜೀನಾಮೆ ನೀಡದೆ ಗತ್ಯಂತರವಿಲ್ಲ’ ಎಂದು ವಾಟಾಳ್ ಗುಡುಗಿದರು.

‘ಅರಮನೆಯೊಳಗಿನ ಜಂಬೂಸವಾರಿ ವೀಕ್ಷಿಸಿದ 300 ಜನರಿಗೆ ಕೊರೊನಾ ಬರುವುದಿಲ್ಲವಾ ? ಸರ್ಕಾರ ಸೂಕ್ತ ಮುಂಜಾಗ್ರತೆ ವಹಿಸಿದ್ದರೆ 1 ಲಕ್ಷ ಜನರಿಗೆ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಬಹುದಿತ್ತು’ ಎಂದು ಇದೇ ಸಂದರ್ಭ ಹೇಳಿದರು.

‘ಉತ್ತರ‌ ಕರ್ನಾಟಕ ನೆರೆ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಕೇಂದ್ರ ಸರ್ಕಾರ ₹ 50 ಸಾವಿರ ಕೋಟಿ ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.

ನಗರದ ಲಷ್ಕರ್ ಠಾಣೆ ಪೊಲೀಸರು, ಮುಂಜಾಗ್ರತೆ ವಹಿಸಿ ವಾಟಾಳ್‌ ನಾಗರಾಜ್‌ ಅವರನ್ನು ವಶಕ್ಕೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.