ADVERTISEMENT

ಸುಸ್ಥಿರ ಅಭಿವೃದ್ಧಿಗೆ ಬಡತನ, ಅನಕ್ಷರತೆಯೇ ಅಡ್ಡಗಾಲು: ವೆಂಕಯ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 9:05 IST
Last Updated 23 ಮಾರ್ಚ್ 2022, 9:05 IST
ವರ್ಚುವಲ್‌ ಆಗಿ ಕಾರ್ಯಕ್ರಮ ಉದ್ಘಾಟಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ವರ್ಚುವಲ್‌ ಆಗಿ ಕಾರ್ಯಕ್ರಮ ಉದ್ಘಾಟಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು   

ಮೈಸೂರು: ‘ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿಯ ಗುರಿ (ಎಸ್‌ಡಿಜಿ) ಸಾಧನೆ ಮಾಡಲು ದೇಶಕ್ಕೆ ಬಡತನ ಮತ್ತು ಅನಕ್ಷರತೆಯೇ ದೊಡ್ಡ ಸವಾಲಾಗಿ ಮಾರ್ಪಟ್ಟಿವೆ. ಮಕ್ಕಳಲ್ಲಿನ ಅಪೌಷ್ಟಿಕತೆ, ಲಿಂಗ ಅಸಮಾನತೆ, ಶುದ್ಧ ಕುಡಿಯುವ ನೀರಿನ ಅಲಭ್ಯತೆ ಹಾಗೂ ಪರಿಸರ ಮಾಲಿನ್ಯ ಕೂಡ ಅಭಿವೃದ್ಧಿಗೆ ಅಡ್ಡಗಾಲಾಗಿ ಪರಿಣಮಿಸಿವೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಭವನದಲ್ಲಿ ಬುಧವಾರ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಸಂಘದ 96ನೇ ವಾರ್ಷಿಕ ಸಭೆ ಹಾಗೂ ಕುಲಪತಿಗಳ ಸಮ್ಮೇಳನವನ್ನು ವರ್ಚುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.

‘2030ರ ಕಾರ್ಯಸೂಚಿಯ ಭಾಗವಾಗಿ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಶ್ವಸಂಸ್ಥೆ ನಿಗದಿಪಡಿಸಿದೆ. 2021ರ ಗುರಿ ಸಾಧನೆ ವರದಿಯಲ್ಲಿ ಡೆನ್ಮಾರ್ಕ್‌, ಸ್ವೀಡನ್‌ ಅಗ್ರಸ್ಥಾನದಲ್ಲಿವೆ. ಜರ್ಮನಿ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಸ್ಪೇನ್‌ ಅಗ್ರ 20ರೊಳಗಿನ ಸ್ಥಾನದಲ್ಲಿವೆ. ಆದರೆ, ಭಾರತ 120ನೇ ರ‍್ಯಾಂಕ್‌ನಲ್ಲಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಿದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಸವಾಲು ಮೆಟ್ಟಿ ನಿಲ್ಲುವ ಜವಾಬ್ದಾರಿ ಯಾವುದೋ ಒಂದು ಸಂಸ್ಥೆ ಅಥವಾ ಸರ್ಕಾರದ್ದು ಮಾತ್ರವಲ್ಲ; ಶಿಕ್ಷಣ ಸಂಸ್ಥೆಗಳು, ಉದ್ಯಮ, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮಾಜ ಪಾಲುದಾರರಾಗಿ ಕಾರ್ಯನಿರ್ವಹಿಸಬೇಕಿದೆ. ಸುಸ್ಥಿರ ಅಭಿವೃದ್ಧಿ ಗುರಿ ತಲು‍ಪಲು ಪೂರಕವಾದ ಅಂಶಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕಿದೆ. 21ನೇ ಶತಮಾನದ ಅಗತ್ಯಗಳಿಗೆ ಸ್ಪಂದಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದಲ್ಲದೆ ಸಂಶೋಧನೆ, ನೀತಿ ಸುಧಾರಣೆ ಹಾಗೂ ಜಾಗೃತಿ ಮೂಡಿಸುವುದರ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು’ ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.