ADVERTISEMENT

ಮೈಸೂರು: ರಂಗೇರಿದ ಗ್ರಾಮಾಂತರ ರಾಜಕಾರಣ

ಗ್ರಾ.ಪಂ ಚುನಾವಣೆ: ಬ್ಲಾಕ್‌ವಾರು ಮೀಸಲಾತಿ, ಅರ್ಹ ಮತದಾರರ ಅಂತಿಮ ಪಟ್ಟಿ ಪ್ರಕಟ

ಡಿ.ಬಿ, ನಾಗರಾಜ
Published 15 ಸೆಪ್ಟೆಂಬರ್ 2020, 3:49 IST
Last Updated 15 ಸೆಪ್ಟೆಂಬರ್ 2020, 3:49 IST
ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಯೊಬ್ಬರು ಅಪ್‌ಲೋಡ್‌ ಮಾಡಿಕೊಂಡಿರುವ ಪೋಸ್ಟರ್
ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಯೊಬ್ಬರು ಅಪ್‌ಲೋಡ್‌ ಮಾಡಿಕೊಂಡಿರುವ ಪೋಸ್ಟರ್   

ಮೈಸೂರು: ಜಿಲ್ಲೆಯ 266 ಗ್ರಾಮ ಪಂಚಾಯಿತಿಗಳ ಬ್ಲಾಕ್‌ವಾರು ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಇದರ ಬೆನ್ನಿಗೆ ಅರ್ಹ ಮತದಾರರ ಅಂತಿಮ ಪಟ್ಟಿಯೂ ಪ್ರಕಟಗೊಂಡಿದ್ದು, ಗ್ರಾಮಾಂತರ ಪ್ರದೇಶದ ರಾಜಕೀಯ ರಂಗೇರಿದೆ.

ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಿಕ್ಕಾಗಿ ಅಗತ್ಯ ಸಿದ್ಧತೆ ಪೂರೈಸಿಕೊಂಡಿರುವ ಚುನಾವಣಾ ಆಯೋಗ, ಯಾವ ಸಂದರ್ಭದಲ್ಲಿ ಬೇಕಾದರೂ ಕೋವಿಡ್–19 ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲನೆಯೊಂದಿಗೆ ಚುನಾವಣೆಗೆ ಅಧಿಸೂಚನೆ ಹೊರಡಿಸಬಹುದು.

ಈ ಅಧಿಸೂಚನೆಯ ನಿರೀಕ್ಷೆಯಲ್ಲಿರುವ ಯುವಕರು, ಗ್ರಾಮ ಪಂಚಾಯಿತಿ ರಾಜಕಾರಣವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಳ್ಳುವುದರಲ್ಲಿ ಪಳಗಿರುವ ಊರ ಮುಖಂಡರು, ಹಿರಿಯರು, ಶಾಸಕರು–ಮಾಜಿ ಶಾಸಕರ ಬೆಂಬಲಿಗರು ತಮ್ಮ ಪ್ರಾಬಲ್ಯ ಸ್ಥಾಪನೆಗಾಗಿ ಈಗಾಗಲೇ ‘ರಾಜಕೀಯ ಕಸರತ್ತಿ’ನಲ್ಲಿ ತಲ್ಲೀನರಾಗಿರುವ ಚಿತ್ರಣ ಗ್ರಾಮೀಣದಲ್ಲಿ ಗೋಚರಿಸುತ್ತಿದೆ.

ADVERTISEMENT

ಆಯಾ ಪಕ್ಷದ ಮುಖಂಡರು ಸಹ ತಮ್ಮ ಬಲವರ್ಧನೆಗಾಗಿಯೇ ಗ್ರಾಮ ಪಂಚಾಯಿತಿ ಚುನಾವಣೆಯತ್ತ ಚಿತ್ತ ಹರಿಸಿದ್ದು, ತಳ ಮಟ್ಟದಲ್ಲಿ ಸಂಘಟನೆ ಚುರುಕುಗೊಳಿಸುವಂತೆ ಬೆಂಬಲಿಗರಿಗೆ ಈಗಾಗಲೇ ಸೂಚಿಸಿದ್ದಾರೆ. ಇದರಿಂದ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ.

ಜಿಲ್ಲಾ/ತಾಲ್ಲೂಕು ಚುನಾವಣಾ ಶಾಖೆಗಳಿಂದ ಮೀಸಲಾತಿ ಪಟ್ಟಿ/ಅಂತಿಮ ಮತದಾರರ ಪಟ್ಟಿ ಪಡೆದಿರುವ ಆಕಾಂಕ್ಷಿಗಳು, ಯಾವ ಬ್ಲಾಕ್‌ನಿಂದ ನಿಂತರೇ ನಮಗೆ ಅನುಕೂಲವಾಗಲಿದೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಯಾರ‍್ಯಾರು ಪ್ರತಿಸ್ಪರ್ಧಿಯಾಗಬಹುದು ? ಮೀಸಲಾತಿ ಕೋಟಾದಡಿ ಸ್ಪರ್ಧಿಸಿದರೆ ಅನುಕೂಲವಾಗಲಿದೆಯಾ ? ನಾನೇ ಸ್ಪರ್ಧಿಸೋಣ್ವಾ ? ನಮ್ಮ ಮನೆಯವರನ್ನು ಅಖಾಡಕ್ಕಿಳಿಸೋಣ್ವಾ?

ಒಬ್ಬನೇ ಸ್ಪರ್ಧಿಸೋದು ಒಳ್ಳೆಯದಾ? ಗುಂಪು ರಚಿಸಿಕೊಳ್ಳೋಣ್ವಾ? ಇಲ್ಲಾ ರಚನೆಗೊಳ್ಳುವ ಗುಂಪಿಗೆ ಸೇರೋಣ್ವಾ? ಯಾವ ದೇವರ ಒಕ್ಕಲು ಹೆಚ್ಚಿವೆ, ಸಂಬಂಧಿಕರ ಬಳಗ ಹೆಚ್ಚಿದೆ ಆ ಗುಂಪಿಗೆ ಸೇರಿಕೊಳ್ಳೋಣ್ವಾ... ಎಂಬ ಪ್ರಶ್ನಾವಳಿಯೊಟ್ಟಿಗೆ ಆಪ್ತರ ಜೊತೆ ಗೋಪ್ಯ ಚರ್ಚೆ ನಡೆಸುತ್ತಿರುವುದು ಅಲ್ಲಲ್ಲೇ ಕಂಡು ಬರುತ್ತಿದೆ.

ಇನ್ನೂ ಕೆಲವು ಆಕಾಂಕ್ಷಿಗಳು ಈಗಿನಿಂದಲೇ ಮನೆ ಮನೆಗೂ ಭೇಟಿ ನೀಡಿ ಚುನಾವಣೆಗೆ ನಿಲ್ಲುವ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಲಹರಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಪಕ್ಷದ ಹಿರಿಯರು, ಮುಖಂಡರು, ಶಾಸಕರ ಬೆಂಬಲ ಗಿಟ್ಟಿಸಿಕೊಂಡು ಅಖಾಡಕ್ಕಿಳಿಯುವ ತಯಾರಿಯಲ್ಲಿ ತಲ್ಲೀನರಾಗಿದ್ದಾರೆ.

ಈಗಾಗಲೇ ಗ್ರಾಮ ಪಂಚಾಯಿತಿಯ ಅಂಗಳ ಪ್ರವೇಶಿಸಿದವರು ಮನೆ ಬಾಗಿಲಿಗೆ ತೆರಳಿ ಸೌಲಭ್ಯ ಒದಗಿಸುವುದು, ಬಿಪಿಎಲ್ ಕಾರ್ಡ್‌ ಮಾಡಿಸಿಕೊಡುವುದು, ಜಮೀನಿನ ಖಾತೆಯಲ್ಲಿನ ‘ಖ್ಯಾತೆ’ ಬಗೆಹರಿಸಿಕೊಡಲೂ ಮುಂದಾಗಿದ್ದಾರೆ. ತಮ್ಮ ಅಧಿಕಾರದ ಅವಧಿ ಮುಗಿದರೂ, ಹಾಲಿ ಅಧ್ಯಕ್ಷರು, ಸದಸ್ಯರಂತೆ ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭಗಳಲ್ಲೂ ಭಾಗಿಯಾಗುತ್ತಿದ್ದಾರೆ ಎಂಬ ದೂರುಗಳು ಗ್ರಾಮೀಣ ಪ್ರದೇಶದ ವಿವಿಧೆಡೆಯಿಂದ ಕೇಳಿ ಬಂದಿವೆ.

ಮೈಸೂರು ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿ ವಿವರ

ತಾಲ್ಲೂಕು; ಗ್ರಾ.ಪಂ.ಕೇಂದ್ರ

ಮೈಸೂರು; 37

ನಂಜನಗೂಡು; 45

ನರಸೀಪುರ; 36

ಹುಣಸೂರು; 41

ಕೆ.ಆರ್.ನಗರ; 34

ಪಿರಿಯಾಪಟ್ಟಣ; 34

ಎಚ್‌.ಡಿ.ಕೋಟೆ; 26

ಸರಗೂರು; 13

ಒಟ್ಟು; 266

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.