
ಮೈಸೂರು: ‘ರಾಷ್ಟ್ರಕವಿ ಕುವೆಂಪು ವಿಶ್ವಮಾನವ ಸಂದೇಶ ಪಸರಿಸಲು ಡಿ.29ರಂದು ಬನ್ನೂರು ಹೋಬಳಿಯ ಯಾಚೇನಹಳ್ಳಿ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಶಾಲಾ ಆವರಣದಲ್ಲಿ ‘ವಿಶ್ವಮಾನವ ಧರ್ಮದ ಮೊದಲ ಅಧಿವೇಶನ’ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾದಾನಂದನಾಥ ಸ್ವಾಮೀಜಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವಮಾನವ ತತ್ವದ ಅಡಿಯಲ್ಲಿ ಕುವೆಂಪು ಆಶಯ ಮುನ್ನೆಲೆಗೆ ತರಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 10ಕ್ಕೆ ಕುವೆಂಪು ಭಾವಚಿತ್ರ ಮೆರವಣಿಗೆ ನಡೆಯಲಿದ್ದು, 11ಕ್ಕೆ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಅತಿಥಿಗಳಾಗಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಚಂದ್ರಶೇಖರ್ ನಂಗಲಿ ಭಾಗವಹಿಸುವರು’ ಎಂದು ತಿಳಿಸಿದರು.
‘ದೇವರು, ಧರ್ಮದ ಹೆಸರಿನಲ್ಲಿ ಜನರಲ್ಲಿ ಮೌಢ್ಯ ತುಂಬಿ ದಾರಿ ತಪ್ಪಿಸುವುದನ್ನು ಹೋಗಲಾಡಿಸಲು ವಿಶ್ವಮಾನವ ಧರ್ಮ ಪರ್ಯಾಯ ಮಾರ್ಗವಾಗಿದೆ. ಕೇಂದ್ರ ಸರ್ಕಾರ ನಡೆಸಲಿರುವ ಗಣತಿ ವೇಳೆ ವಿಶ್ವಮಾನವ ಧರ್ಮಕ್ಕೆ ಮಾನ್ಯತೆ ಕೊಡುವಂತೆ ಮನವಿ ಮಾಡಲು ಈ ಅಧಿವೇಶನ ನೆರವಾಗಲಿದೆ’ ಎಂದರು.
ಪ್ರಗತಿಪರ ಚಿಂತಕ ವೈ.ಎನ್.ಶಂಕರೇಗೌಡ ಮಾತನಾಡಿ, ‘ಮಂತ್ರಮಾಂಗಲ್ಯ ಆಶಯದಲ್ಲಿ ಸರಳ ವಿವಾಹ ಆಗುವವರಿಗೆ ಯಾಚೇನಹಳ್ಳಿ ಕೇಂದ್ರ ವೇದಿಕೆಯಾಗಲಿದೆ’ ಎಂದು ತಿಳಿಸಿದರು.
ವಿಶ್ವಮಾನವ ಧರ್ಮದ ಮೊದಲ ಅಧಿವೇಶನ ಸ್ವಾಗತ ಸಮಿತಿ ಸಂಚಾಲಕ ಚಂದ್ರಶೇಖರ್ ದ.ಕೋ.ಹಳ್ಳಿ ಮಾತನಾಡಿ, ‘ಕ್ರಿಶ್ಚಿಯನ್, ಇಸ್ಲಾಂ, ಬೌದ್ಧ ಧರ್ಮಗಳ ಗುರುಗಳನ್ನು ಆಹ್ವಾನಿಸಲಾಗಿದೆ. ಜಾತ್ಯತೀತವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ. ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.
ಕನ್ನಡ ಉಪನ್ಯಾಸಕ ಉಮೇಶ್ ದಡಮಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.