ಮೈಸೂರು: ‘ನಮ್ಮ ವೃತ್ತಿ ಏನೇ ಇರಬಹುದು, ಆದರೆ ನಾವೆಲ್ಲರೂ ವಿಶ್ವಕರ್ಮರು ಎಂಬ ಭಾವ ಎಲ್ಲರಲ್ಲೂ ಇರಬೇಕು’ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಕಲಾಮಂದಿರದಲ್ಲಿ ಬುಧವಾರ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ನಾರಾಯಣ ಗುರುಗಳು ಹೇಳಿದಂತೆ, ಭಗವಂತನ ರೂಪಗಳು ಬೇರೆ ಬೇರೆ ಇರಬಹುದು. ಆದರೆ ಎಲ್ಲರಿಗೂ ಮೂಲ ದೇವ ಒಬ್ಬನೇ ಆಗಿದ್ದಾನೆ. ಹಾಗೆಯೇ ನಮ್ಮೆಲ್ಲರ ಕಸುಬುಗಳು ಬೇರೆ ಬೇರೆ ಇದ್ದರೂ ಸಹ ನಮ್ಮೆಲ್ಲರ ಅಸ್ತಿತ್ವ ಕಾಪಾಡಿಕೊಳ್ಳಲು ಎಲ್ಲರೂ ಒಂದಾಗುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.
‘ ಯಾವುದೇ ವಸ್ತು– ವಿಚಾರಕ್ಕೆ ರೂಪ ಕೊಡುವ ಶಕ್ತಿ ವಿಶ್ವಕರ್ಮ ಜನಾಂಗಕ್ಕೆ ದೊರೆತಿರುವ ವರವಾಗಿದೆ. ಯಂತ್ರಗಳ ಈ ಕಾಲದಲ್ಲಿ ನಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿದೆ. ಆದರೆ ಇದನ್ನು ಅಲ್ಲಗಳೆಯದೇ ನಮ್ಮ ಮೂಲ ಕಸುಬನ್ನು ಕಾಪಾಡಿಕೊಂಡು ಬರುವ ಹಿತಾಸಕ್ತಿ ನಮ್ಮಲ್ಲಿರಬೇಕಾಗಿದೆ’ ಎಂದರು.
‘ಚಿನ್ನ ಬೆಳ್ಳಿ, ಕಲ್ಲುಬಂಡೆಗಳಿಗೆ, ಮರಗಳಿಗೆ ರೂಪ ಕೊಡುವ ಶಕ್ತಿ ವಿಶ್ವಕರ್ಮದವರಿಗೆ ನೀಡಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಜನಾಂಗದ ಸಮಸ್ಯೆ ಪರಿಹಾರಕ್ಕೆ ದಾರಿ ತಪ್ಪದೇ ಎಲ್ಲರೂ ಒಗ್ಗೂಡಬೇಕಿದ್ದು, ಸಾಂಪ್ರದಾಯಿಕವಾದ ನಮ್ಮ ಕಲೆಗಳನ್ನು ಕಾಪಾಡಿಕೊಳ್ಳಬೇಕಿದೆ. ಸಮುದಾಯ ಎಂದು ಹೇಳುವ ಸಂದರ್ಭದಲ್ಲಿ ನಮ್ಮಲ್ಲೇ ಭಿನ್ನತೆ ಇರಬಾರದು. ನಿಮ್ಮಲ್ಲಿರುವ ರೂಪ ಕೊಡುವ ಶಕ್ತಿ ಸದಾ ಮುಂದುವರೆಯಬೇಕು’ ಎಂದು ಆಶಿಸಿದರು.
ಹಾಸನದ ಅರೆಮಾದನಹಳ್ಳಿ ಸಂಸ್ಥಾನದ ವಿಶ್ವ ಜಗದ್ಗುರು ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ, ಶಿಲ್ಪಿ ಅರುಣ್ ಯೋಗಿರಾಜ್, ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ದೇಶಕ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹುಚ್ಚಪ್ಪ, ಪದಾಧಿಕಾರಿಗಳಾದ ಸಿ.ಟಿ. ಆಚಾರ್, ರೇವಣ್ಣ, ಎ.ಎನ್. ಸ್ವಾಮಿ, ಜಯಕುಮಾರ್, ಎನ್. ಚಂದ್ರು, ನಿಂಗಾಚಾರ್, ಜಯರಾಮಾಚಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.