ADVERTISEMENT

ನ್ಯಾಯ ಯೋಧ ಪ್ರಶಸ್ತಿ ಚಮಚಾಗಿರಿಯ ಸಂಕೇತ: ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:22 IST
Last Updated 18 ಜುಲೈ 2025, 4:22 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಮೈಸೂರು: ‘ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ‘ನ್ಯಾಯ ಯೋಧ’ ಪ್ರಶಸ್ತಿ ನೀಡಿ ಚಮಚಾಗಿರಿ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಟೀಕಿಸಿದರು.

‘ತಮ್ಮನ್ನು ತಾವೇ ಹಿಂದುಳಿದವರ ಚಾಂಪಿಯನ್ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ‘ಅಹಿಂದ’ ಕಟ್ಟಿದ್ದು ಸಿ.ಎಸ್. ದ್ವಾರಕನಾಥ್ ಮತ್ತು ಆರ್.ಎಲ್. ಜಾಲಪ್ಪ. ಆದರೆ ಕೋಲಾರದಲ್ಲಿ ರಾತ್ರೋರಾತ್ರಿ ಜಾಲಪ್ಪ ಅವರ ಫೋಟೊ ತೆಗೆದುಹಾಕಿ ತಮ್ಮ ಫೋಟೊ ಹಾಕಿದ್ದು ಯಾರು?’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರಿಗೆ ಹಿಂದುಳಿದವರಲ್ಲಿ ಕುರುಬ, ಕುಂಬಾರ, ಉಪ್ಪಾರ ಮೊದಲಾದ ಐದಾರು ಜಾತಿ ಹೆಸರು ಬಿಟ್ಟು ಬೇರೆ ಜಾತಿ ಹೆಸರು ಹೇಳಲೂ ಬರುವುದಿಲ್ಲ. ಅವರಿಗೆ ಕೆಳಗಿರುವ ಜಾತಿಗಳ ಸಂಪರ್ಕವೇ ಇಲ್ಲ. ನೀವು ಹಿಂದುಳಿದ ನಾಯಕರಾಗಿದ್ದರೆ ನಾಲ್ಕು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿರುವುದು ಯಾರಿಗೆ?’ ಎಂದು ಪ್ರಶ್ನಿಸಿದರು.

‘ಸಾಧನಾ ಸಮಾವೇಶದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ. ನಿಮ್ಮ ಅವಧಿಯಲ್ಲಿ ಎರಡೂವರೆ ಸಾವಿರ ಸರ್ಕಾರಿ ಶಾಲೆಗೆ ಬೀಗ ಹಾಕಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಸುಮಾರು 1 ಲಕ್ಷ ಮಂದಿ ಸ್ಥಳೀಯ ಪ್ರತಿನಿಧಿಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಇದು ಯಾವ ಸುಭಿಕ್ಷ ರಾಜ್ಯ?’ ಎಂದರು.

‘ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ನಿಧನರಾದಾಗ ಸಿದ್ದರಾಮಯ್ಯ, ಸಚಿವ ಡಾ. ಎಚ್.ಸಿ.ಮಹದೇವಪ್ಪ ಅಂತ್ಯಕ್ರಿಯೆಗೆ ಏಕೆ ಬರಲಿಲ್ಲ? ಇದು ಕೆಬಿಜಿ ಅವರ ಪತ್ರಿಕಾ ಸೇವೆಗೆ ಮಾಡಿದ ಅಪಮಾನ’ ಎಂದು ಖಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.