ADVERTISEMENT

ಸಮ್ಮಿಶ್ರ ಸರ್ಕಾರದಿಂದ ಹೊರಬಂದ ಕ್ಷಿಪ್ರಕ್ರಾಂತಿ ದೇಶಕ್ಕೆ ಮಾದರಿ: ವಿಶ್ವನಾಥ್

ಬಿಜೆಪಿ ಕಚೇರಿಯಲ್ಲಿ ಎಚ್‌.ವಿಶ್ವನಾಥ್‌ಗೆ ಅಭಿನಂದನೆ; ಮೋದಿ, ಬಿಎಸ್‌ವೈ ಗುಣಗಾನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 4:10 IST
Last Updated 24 ಜುಲೈ 2020, 4:10 IST
ವಿಧಾನ ಪರಿಷತ್‌ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಎಚ್‌.ವಿಶ್ವನಾಥ್‌ ಅವರನ್ನು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಅಭಿನಂದಿಸಿದರು
ವಿಧಾನ ಪರಿಷತ್‌ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಎಚ್‌.ವಿಶ್ವನಾಥ್‌ ಅವರನ್ನು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಅಭಿನಂದಿಸಿದರು   

ಮೈಸೂರು: ‘ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ನಾವು ಮಾಡಿದ ಕ್ಷಿಪ್ರ ಕ್ರಾಂತಿ ಈಗ ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಗೂ ಮಾದರಿಯಾಗಿದೆ. ಇಡೀ ದೇಶದಲ್ಲಿ ಪ್ರತಿಧ್ವನಿಸುತ್ತಿದೆ’ ಎಂದು ನೂತನ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ನಗರ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಅಂದಿನ ನಡೆ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿತು. ನಾವು 17 ಮಂದಿ ಅಂದು ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಹೋಗಲಿಲ್ಲ. ಬದಲಾಗಿ ಆಡಳಿತ ಪಕ್ಷವನ್ನೇ ಬಿಟ್ಟು ಹೊರಬಂದೆವು’ ಎಂದರು.

ADVERTISEMENT

‘ರಾಜ್ಯದಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಾರಾದರೂ ಇದ್ದರೆ ಅದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತ್ರ. ಅವರು ಮಾತಿಗೆ ತಪ್ಪದ ಮಗ’ ಎಂದು ಗುಣಗಾನ ಮಾಡಿದರು.

‘ವಿಧಾನ ಪರಿಷತ್‌ ಹಾಗೂ ರಾಜ್ಯಸಭೆಗೆ ಆಯ್ಕೆ ಮಾಡಿದ ವ್ಯಕ್ತಿಗಳನ್ನು ಗಮನಿಸಿದರೆ ಬಿಜೆಪಿ ನಿಲುವು ವಿಶೇಷವೆನಿಸುತ್ತದೆ. ಎಲ್ಲಾ ಜಾತಿಗಳಿಗೂ ಈ ಪಕ್ಷ ಅವಕಾಶ ನೀಡುತ್ತಿದೆ’ ಎಂದು ಶ್ಲಾಘಿಸಿದರು.

‘ಆರಂಭದಲ್ಲಿ ನಾನು ಕೂಡ ಬಿಜೆಪಿ ಕೋಮುವಾದಿ ಪಕ್ಷ ಎಂದುಕೊಂಡಿದ್ದೆ. ಆದರೆ, ಕ್ರಮೇಣ ಈ ಪಕ್ಷದ ನಡವಳಿಕೆ, ಚಹರೆ, ಯೋಚನೆ, ಯೋಜನೆ, ಚಿಂತನೆ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಿಲ್ಲ. ಹೀಗಾಗಿ, ಈ ಹಿಂದೆಯೇ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಸಿದ್ದೆ’ ಎಂದರು.

‘ಇದು ಅಧಿಕಾರವಲ್ಲ; ಜವಾಬ್ದಾರಿ ನಿಭಾಯಿಸಲು ಸಿಕ್ಕಿರುವ ಅವಕಾಶ. ಮೇಲ್ಮನೆ ಸದಸ್ಯನಾಗಿ ರಾಜ್ಯದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸುವ ಕೆಲಸವನ್ನು ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ರಾಜಕಾರಣಕ್ಕೆ ಅಂತ್ಯವೇ ಇಲ್ಲ. ಉಸಿರು ಇರುವ ತನಕ ರಾಜಕಾರಣ ಮಾಡಬಹುದು. ಯಾರ ರಾಜಕಾರಣವನ್ನೂ ಯಾರಿಗೂ ಮುಗಿಸಲು ಆಗುವುದಿಲ್ಲ. ಅದು ಸಾಧ್ಯವಿರುವುದು ಜನಶಕ್ತಿಗೆ ಮಾತ್ರ’ ಎಂದು ಹೇಳಿದರು.

ಬಾಂಬೆ ಡೇಸ್‌ ಪುಸ್ತಕ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ ಸಂದರ್ಭದ ಘಟನೆಗಳ ಕುರಿತಾದ ‘ದಿ ಬಾಂಬೆ ಡೇಸ್‌’ ಪುಸ್ತಕವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆ ಎಂದರು.

ಮೈಸೂರು ನಗರ ಕಾಂಗ್ರೆಸ್‌ ಅಧ್ಯಕ್ಷ ಶ್ರೀವತ್ಸ ಎಂದು ಬಾಯ್ತಪ್ಪಿ ಹೇಳಿದ ವಿಶ್ವನಾಥ್‌, ತಕ್ಷಣವೇ ಕ್ಷಮೆಯಾಚಿಸಿ, ಬಿಜೆಪಿ ಅಧ್ಯಕ್ಷ ಎಂದು ಸರಿಪಡಿಸಿಕೊಂಡರು.

ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಮಾತನಾಡಿ, ‘ವಿಶ್ವನಾಥ್‌ ಅವರ ಆಯ್ಕೆ ರಾಜಕೀಯವಾಗಿ ಮೈಸೂರು ಜಿಲ್ಲೆಗೆ ಶಕ್ತಿ ತುಂಬಿದೆ. ಈ ಭಾಗದಲ್ಲಿ ಅವರು ಪಕ್ಷ ಮುನ್ನಡೆಸಬೇಕು’ ಎಂದರು.

ಬಿಜೆಪಿ ಮುಖಂಡರಾದ ಸಿ.ಎಚ್‌.ವಿಜಯಶಂಕರ್‌, ಬಾಬಣ್ಣ, ರಾಜೇಂದ್ರ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.