ADVERTISEMENT

ವಿವೇಕ ಸ್ಮಾರಕ: ಹೈಕೋರ್ಟ್ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:39 IST
Last Updated 7 ಫೆಬ್ರುವರಿ 2021, 16:39 IST

ಮೈಸೂರು: ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ನಗರದ ಮಹಾರಾಣಿ ಮಾದರಿ ಶಾಲೆಯ ಜಾಗವನ್ನು ಹಸ್ತಾಂತರಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಜಾಗದ ವಿವಾದ ಕುರಿತಂತೆ ನ್ಯಾಯಾಲಯದಲ್ಲಿ ಮೇಲ್ಮನವಿಯ ವಿಚಾರಣೆ ನಡೆಯುತ್ತಿದ್ದರೂ ರಾಮಕೃಷ್ಣ ಆಶ್ರಮದ ಮನವಿ ಮೇರೆಗೆ ಮುಖ್ಯಮಂತ್ರಿ ಶಾಲೆಯ ಜಾಗವನ್ನು ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ಆಶ್ರಮಕ್ಕೆ ಹಸ್ತಾಂತರಿಸಿ ಎಂದು ಸೂಚಿಸಿದ್ದರು.

ಈ ಸೂಚನೆಯನ್ವಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಸ್ತಾಂತರದ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ, ಶಾಲೆಯ 25 ವಿದ್ಯಾರ್ಥಿಗಳ ಪರವಾಗಿ ಪೋಷಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್, ರಾಮಕೃಷ್ಣ ಆಶ್ರಮ ಹಾಗೂ ಸರ್ಕಾರದ ವಿವಿಧ ಹಂತದ ಅಧಿಕಾರಿಗಳು, ಸಂಘ ಸೇರಿದಂತೆ ಏಳು ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡುವ ಜೊತೆಗೆ, ಶಿಕ್ಷಣ ಇಲಾಖೆಯ ಆದೇಶಕ್ಕೆ ಜ.25ರಂದು ಮಧ್ಯಂತರ ತಡೆಯಾಜ್ಞೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.