ADVERTISEMENT

ಎನ್‌ಟಿಎಂ ಶಾಲೆ ಆವರಣದಲ್ಲೇ ವಿವೇಕಾನಂದ ಸ್ಮಾರಕ ನಿರ್ಮಾಣವಾಗಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 7:39 IST
Last Updated 17 ಅಕ್ಟೋಬರ್ 2019, 7:39 IST

ಮೈಸೂರು: ನಗರದ ಎನ್‌ಟಿಎಂ ಶಾಲೆಯ ಆವರಣದಲ್ಲೇ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣವಾಗಲಿ ಎಂದು ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ.ಪ್ರೇಮಕುಮಾರ್ ಒತ್ತಾಯಿಸಿದರು.

ಶಾಲೆಯ ಜಾಗದಲ್ಲಿ ಸ್ಮಾರಕ ನಿರ್ಮಿಸುವಂತೆ ನಗರಪಾಲಿಕೆಯು 2012ರಲ್ಲಿ ರಾಮಕೃಷ್ಣ ಮಠಕ್ಕೆ ಅನುಮತಿ ನೀಡಿದೆ. ಆದರೆ, ಇದಕ್ಕೆ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲೆ ತೆರವುಗೊಳಿಸದಂತೆ ಮೌಖಿಕ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಮಠವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮಠಕ್ಕೆ ಶಾಲೆಯ ಜಾಗವನ್ನು ಹಸ್ತಾಂತರಿಸುವಂತೆ ಆದೇಶ ನೀಡಿದೆ.

ಆದರೆ, ಇದೀಗ ಶಾಲೆಯ ಜಾಗವನ್ನು ಮಠಕ್ಕೆ ನೀಡದೇ ಇರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿರುತ್ತದೆ. ಅಲ್ಲದೇ, ಶಾಲೆಗೆ ಮಕ್ಕಳ ನೋಂದಣಿಯೂ ಇಲ್ಲ. 8–10 ಕಿಲೋಮೀಟರ್‌ ದೂರದಿಂದ ಮಕ್ಕಳನ್ನು ಬಲವಂತವಾಗಿ ಕರೆತಂದಿರುವ ಕೆಲವರು ಬಲವಂತದಿಂದ ನೋಂದಣಿ ಮಾಡಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

1892ರಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನಕ್ಕೆ ವಿವೇಕಾನಂದರನ್ನು ಕಳುಹಿಸಲು ಮೈಸೂರಿನ ಮಹಾರಾಜರು ಪ್ರೋತ್ಸಾಹಿಸಿದ್ದರು. ಹಾಗಾಗಿ, ಮೈಸೂರಿನಲ್ಲಿ ಶಾಲೆಯ ನಿಗದಿತ ಜಾಗದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಎಂ.ಎ.ಮೋಹನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.