ADVERTISEMENT

ನಮ್ಮನ್ನು ನಾವು ಅರಿತುಕೊಳ್ಳಲು...

ರಮೇಶ ಕೆ
Published 20 ಡಿಸೆಂಬರ್ 2019, 14:44 IST
Last Updated 20 ಡಿಸೆಂಬರ್ 2019, 14:44 IST
.
.   

ದೇಹ ದಂಡಿಸಲು ಬೆಳಿಗ್ಗೆ ಎದ್ದು ಕಿಲೋಮೀಟರ್‌ಗಟ್ಟಲೇ ನಡೆಯುವವರು ಇದ್ದಾರೆ. ಸ್ಪರ್ಧೆಗೆಂದು ವಾಕ್‌ ಮಾಡುವವರನ್ನೂ ನೋಡಿದ್ದೇವೆ. ಆದರೆ, ಗ್ರಾಮೀಣ ಭಾರತದ ವಾಸ್ತವ ಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಹಾಗೂ ಆ ಮೂಲಕ ‘ನಮ್ಮನ್ನು ನಾವು ಅರಿತುಕೊಳ್ಳುವುದು’ ಎಂಬ ವಿಭಿನ್ನ ಆಲೋಚನೆಯೊಂದಿಗೆ ಮೈಸೂರು ಜಿಲ್ಲೆಯ 41 ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಹೋರಟಿದೆ ಇಲ್ಲೊಂದು ತಂಡ.

ನಮ್ಮನ್ನು ನಾವು ಅರಿತುಕೊಳ್ಳುವುದು ಅಂದರೆ ನಮ್ಮೊಳಗಿನ ಅನುಸಂಧಾನ ಎನ್ನಬಹುದು. ‘ನನ್ನೊಳಗಿನ ನಡಿಗೆ’ (ವಾಕ್‌ ವಿತ್‌ ಇನ್‌) ಎಂಬ ಧ್ಯೇಯದೊಂದಿಗೆಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್ ಸಂಸ್ಥಾಪಕ ಡಾ. ಆರ್‌. ಬಾಲಸುಬ್ರಹ್ಮಣ್ಯಂ ನೇತೃತ್ವದ ತಂಡ ಡಿ. 22ರಿಂದ 29ರವರೆಗೆ ಕಾಲ್ನಡಿಗೆಯಲ್ಲಿ ಗ್ರಾಮೀಣ ಪ್ರದೇಶಗಳನ್ನು ಸುತ್ತಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ಆಗುತ್ತಿರುವ ಪರಿಣಾಮ; ಧರ್ಮ, ಜಾತಿ, ಆರ್ಥಿಕ ಅಸಮಾನತೆಗೆ ಮೂಲ ಕಾರಣವೇನು ಎಂಬುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ತಂಡದ 75ಕ್ಕೂ ಹೆಚ್ಚು ಸದಸ್ಯರು ಸದುದ್ದೇಶದ ಪಯಣಕ್ಕೆ ಸಿದ್ಧರಾಗಿದ್ದಾರೆ.

ಡಾ. ಆರ್‌. ಬಾಲಸುಬ್ರಹ್ಮಣ್ಯಂ ಅವರು ಕಾಲ್ನಡಿ ಜಾಥಾ ಆಯೋಜಿಸಿದ್ದು ಇದೇ ಮೊದಲಲ್ಲ. 2008ರಲ್ಲಿ ಎಚ್‌.ಡಿ.ಕೋಟೆಯಿಂದ 120 ಹಳ್ಳಿಗಳ ಮೂಲಕ ಬೆಂಗಳೂರಿನವರೆಗೆ ನಡೆದುಕೊಂಡು ಹೋಗಿದ್ದರು. ಕಾರಣ, ಮಾಹಿತಿ ಹಕ್ಕು ಕಾಯ್ದೆ ಅರಿವು ಮೂಡಿಸುವುದು ಹಾಗೂ ಭ್ರಷ್ಟಾಚಾರ ವಿರುದ್ಧ ಹೋರಾಟವಾಗಿತ್ತು. ಸುಮಾರು 2 ಲಕ್ಷ ಜನರಿಗೆ ಅರಿವು ಮೂಡಿಸಿದ್ದರು. ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಪಣ ತೊಟ್ಟಿದ್ದಾರೆ.

ADVERTISEMENT

‘ಭಾರತದ ಹಳ್ಳಿಗಳ ವಾಸ್ತವ ಸ್ಥಿತಿಯನ್ನು ಅಲ್ಲಿಗೆ ಹೋಗಿಯೇ ತಿಳಿದುಕೊಳ್ಳಬೇಕು, ಅಲ್ಲಿನ ಜನರೊಂದಿಗೆ ಬೆರೆತು, ಅವರ ಕಷ್ಟ ಸುಖಗಳನ್ನು ಅರಿತುಕೊಳ್ಳಬೇಕು ಹಾಗೂ ಪರಿಹಾರ ಕಂಡುಕೊಳ್ಳಬೇಕು ಎಂಬುದು ಈ ನಡಿಗೆಯ ಉದ್ದೇಶ. ಪ್ರತಿದಿನ 6ರಿಂದ 8 ಹಳ್ಳಿಗಳಿಗೆ ಕಾಲ್ನಡಿಗೆ ಮೂಲಕವೇ ಸಂಚರಿಸಿ ಜನರ ಜೊತೆ ಬೆರೆತು ಅವರೊಂದಿಗೆ ಚರ್ಚಿಸಲಾಗುತ್ತದೆ’ ಎನ್ನುತ್ತಾರೆ ಆರ್‌.ಬಾಲಸುಬ್ರಹ್ಮಣ್ಯಂ.

ಈ ಅವಧಿಯಲ್ಲಿ ಸದಸ್ಯರು ಶಾಲೆ, ದೇವಸ್ಥಾನ ಆವರಣದಲ್ಲಿ ರಾತ್ರಿಯನ್ನು ಕಳೆಯಲಿದ್ದಾರೆ. ಹೆಚ್ಚಾಗಿ 35 ವರ್ಷ ಕೆಳಗಿನವರೇ ಈ ತಂಡದಲ್ಲಿದ್ದಾರೆ.

ಪಯಣದ ಹಾದಿ...

ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆಯಿಂದ ಆರಂಭವಾಗುವ ನಡಿಗೆ ಕೂರ್ಗಳ್ಳಿ, ಬೆಳವಾಡಿ, ಬಸವನಪುರ, ಮರಟಿಕ್ಯಾತನಹಳ್ಳಿ, ಕೇರ್ಗಳ್ಳಿ ತಲುಪಲಿದೆ.

ಎರಡನೇ ದಿನ ಕೇರ್ಗಳ್ಳಿಯಿಂದ ಕೆ.ಸಾಲುಂಡಿ, ಮೂಗಯ್ಯನಹುಂಡಿ, ದನಗಳ್ಳಿ, ಕೆಲ್ಲಹಳ್ಳಿ. ಮೂರನೇ ದಿನ ಬಿ.ಕಾಟೂರು, ಅಹಲ್ಯ, ಗೌಡರಹುಂಡಿ, ಹುಲ್ಲಹಳ್ಳಿ. ನಾಲ್ಕನೇ ದಿನ–ಶಿರಮಳ್ಳಿ, ಹೆಗ್ಗಡಹಳ್ಳಿ, ಮೊಬ್ಬಳ್ಳಿ, ಹಂಡುವಿನಹಳ್ಳಿ– ನಂಜನಗೂಡು.

ಐದನೇ ದಿನ– ಹೆಜ್ಜಿಗೆ, ತೊರೆಮಾವು, ಹುಳಿಮಾವು, ಹದಿನಾರು, ಹದಿನಾರು ಮೋಳೆ, ಆಲತ್ತೂರು, ಸುತ್ತೂರು. ಆರನೇ ದಿನ–ಹೊಸಕೋಟೆ, ಮೊಂಸಂಬಯ್ಯನಹಳ್ಳಿ, ಮಾರ್ಶೆಟ್ಟಿಹಳ್ಳಿ. ಏಳನೇ ದಿನ–ಹಡಜನ, ಹೊಸುಂಡಿ, ಜೆಎಸ್‌ಎಸ್‌ ಮಹಾಪೀಠ ಅಲ್ಲಿಂದ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಕೇಂದ್ರ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.