ADVERTISEMENT

ದೊಡ್ಡಗಡಿಯಾರ ದುರಸ್ತಿಗೆ ಅನುಮೋದನೆ

ರೈಲು ನಿಲ್ದಾಣ ಕಟ್ಟಡದ ನವೀಕರಣ ಕಾಮಗಾರಿ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:33 IST
Last Updated 13 ಮೇ 2019, 20:33 IST

ಮೈಸೂರು: ನಗರದ ಪಾರಂಪರಿಕ ದೊಡ್ಡ ಗಡಿಯಾರದಲ್ಲಿ ಮೂಡಿರುವ ಬಿರುಕನ್ನು ಮುಚ್ಚಿ ಅದನ್ನು ದುರಸ್ತಿಗೊಳಿಸಲು ಇಲ್ಲಿ ಸೋಮವಾರ ನಡೆದ ಪಾರಂಪರಿಕ ತಜ್ಞರ ಸಮಿತಿ ಅನುಮೋದನೆ ನೀಡಿತು.

ಇದರ ಜತೆಗೆ, ರೈಲು ನಿಲ್ದಾಣ ಕಟ್ಟಡದ ನವೀಕರಣ ಕಾಮಗಾರಿಗೂ ತಜ್ಞರಿಂದ ಆಕ್ಷೇಪ ವ್ಯಕ್ತವಾಯಿತು. ಕೂಡಲೇ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೊಡ್ಡ ಗಡಿಯಾರದ ಜತೆಗೆ ಜಯಲಕ್ಷ್ಮೀವಿಲಾಸ ಅರಮನೆ ದುರಸ್ತಿಗೂ ಹಸಿರು ನಿಶಾನೆ ತೋರಲಾಯಿತು. ನಂತರ, ದೊಡ್ಡ ಗಡಿಯಾರವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಯಿತು.

ADVERTISEMENT

ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮೀವಿಲಾಸ ಅರಮನೆಯು ಹಲವು ವರ್ಷಗಳಿಂದ ದುರಸ್ತಿಯಾಗಿಲ್ಲ. ದಿನದಿಂದ ದಿನಕ್ಕೆ ಇದು ಶಿಥಿಲವಾಗುತ್ತಿದೆ. ಮೇ 23ರಂದು ಇದನ್ನು ಪರಿಶೀಲಿಸಲು ನಿರ್ಧರಿಸಲಾಯಿತು. ಮೈಸೂರು ವಿಶ್ವವಿದ್ಯಾಲಯ ಕುಲಪತಿ, ಕುಲಸಚಿವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಪರಿಶೀಲನಾ ತಂಡದಲ್ಲಿರುತ್ತಾರೆ. ಎಲ್ಲ ಪಾರಂಪರಿಕ ಕಟ್ಟಡಗಳಲ್ಲಿ ಅಗ್ನಿ ನಿರೋಧಕ ಸಾಧನಗಳನ್ನು ಅಳವಡಿಸಲೂ ಅನುಮೋದನೆ ನೀಡಲಾಯಿತು.

ದೊಡ್ಡ ಗಡಿಯಾರದಲ್ಲಿ ಬಿರುಕು; ಆತಂಕ

ದೊಡ್ಡ ಗಡಿಯಾರದ ಗೋಪುರದಲ್ಲಿ ಕಾಣಿಸಿಕೊಂಡಿರುವ ಬಿರುಕು ಕುರಿತು ಸಮಿತಿ ಸದಸ್ಯರು ಡ್ರೋನ್‌ ಮೂಲಕ ತೆಗೆದ ಛಾಯಾಚಿತ್ರ ಮತ್ತು ವಿಡಿಯೊ ತುಣುಕುಗಳನ್ನು ಪ್ರದರ್ಶಿಸಿದರು. ಒಂದು ವೇಳೆ ಈಗ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಮುಂದೆ ಅನಾಹುತ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದರು.

ಇದರ ಜತೆಗೆ, ಬೊಮ್ಮಾಯಿ ಛತ್ರದ ಸಂರಕ್ಷಣೆ, ಮೈಸೂರು ಮಹಾರಾಜ ಕಾಲೇಜಿನ ಕುಸಿದು ಬಿದ್ದಿರುವ ಕಾಂಪೌಂಡ್ ನಿರ್ಮಾಣ, ಸರ್ಕಾರಿ ಮನ್ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ನೀಲನಕ್ಷೆ ಸಿದ್ಧಪಡಿಸಲು ಒಪ್ಪಿಗೆ ಸೂಚಿಸಲಾಯಿತು.

ಪಾಲಿಕೆ ವ್ಯಾಪ್ತಿಯ ಹಳೆಯ ಕಟ್ಟಡಗಳನ್ನು ಕೆಡವಲು ನಿರಪೇಕ್ಷಣಾ ಪತ್ರ ನೀಡುವ ಮುನ್ನ ಅದು ಪಾರಂಪರಿಕ ಕಟ್ಟಡವೋ ಅಥವಾ ಅಲ್ಲವೋ ಎನ್ನುವುದನ್ನು ಪರಿಶೀಲಿಸಿ ಪುರಾತತ್ವ ಇಲಾಖಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ಪಿ.ಜನಾರ್ಧನ್, ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸಲಾದ ತಜ್ಞರ ಸಮಿತಿ ಸದಸ್ಯರಾದ ಪ್ರೊ.ಎನ್.ಎಸ್.ರಂಗರಾಜು, ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ, ಡಾ.ಚಂಪಾ ಅರಸ್, ಎಚ್.ಡಿ.ನಾಗೇಶ್, ಕಾವಾ ನಿವೃತ್ತ ಡೀನ್ ವಿ.ಎ.ದೇಶಪಾಂಡೆ, ಎನ್.ಆರ್.ಅಶೋಕ್, ಇತಿಹಾಸಕಾರ ಈಚನೂರು ಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.