ADVERTISEMENT

ಮೈಸೂರು: ನಂಜರಾಜೇ ಅರಸ್ ವಿರುದ್ಧ ಆಕ್ರೋಶ

ಪ್ರಮೋದಾದೇವಿ ಒಡೆಯರ್ ಅಭಿಮಾನಿಗಳ ಬಳಗದಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 1:59 IST
Last Updated 12 ಜೂನ್ 2020, 1:59 IST
   

ಮೈಸೂರು: ‘ಪ್ರೊ.ಪಿ.ವಿ.ನಂಜರಾಜೇ ಅರಸ್ ಪ್ರಚಾರಕ್ಕಾಗಿ ಮೈಸೂರು ಸಂಸ್ಥಾನಕ್ಕೆ ಕಪ್ಪು ಚುಕ್ಕೆ ಬರುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ’ ಎಂದು ಪ್ರಮೋದಾದೇವಿ ಒಡೆಯರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಜೆ.ಜಯಶಂಕರ್ ಹೇಳಿದರು.

‘ಅರಸ್‌ ಅವರಿಗೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ನಾಲ್ವಡಿ ಮತ್ತು ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಪ್ರಮೋದಾದೇವಿ ತಮ್ಮ ನಿಲುವು ವ್ಯಕ್ತಪಡಿಸುತ್ತಿಲ್ಲ. ರಾಜ್ಯಸಭಾ ಸದಸ್ಯರಾಗಲಿಕ್ಕಾಗಿಯೇ ಬಿಜೆಪಿ ಬೆಂಬಲಿಗರಂತೆ ವರ್ತಿಸುತ್ತಿದ್ದಾರೆ ಎಂದು ನಂಜರಾಜೇಅರಸ್ ನೀಡಿರುವ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಪ್ರಮೋದಾದೇವಿ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನಂಜರಾಜೇಅರಸ್ ಹಿಂದಿನಿಂದಲೂ ಮೈಸೂರು ಮನೆತನಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಪ್ರಗತಿಪರರು ಈ ನಕಲಿ ಇತಿಹಾಸ ತಜ್ಞರನ್ನು ದೂರವಿಟ್ಟು ಹೋರಾಟ ನಡೆಸಬೇಕು. ಅರಸ್ ತಮ್ಮ ನಡವಳಿಕೆ ತಿದ್ದಿಕೊಳ್ಳದಿದ್ದರೇ ಅವರ ವಿರುದ್ಧವೇ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಾಲ್ವಡಿ ಪ್ರತಿಮೆಗೆ ಸಮಾನವಾಗಿ ಸರ್‌.ಎಂ.ವಿ ಪ್ರತಿಮೆ ನಿರ್ಮಾಣಕ್ಕೆ ನಮ್ಮ ವಿರೋಧವಿದೆ’ ಎಂದು ಬಳಗದ ಪದಾಧಿಕಾರಿಗಳು ತಿಳಿಸಿದರು.

ಬಳಗದ ಉಪಾಧ್ಯಕ್ಷ ಬಿ.ಆರ್.ಪರಂಜ್ಯೋತಿ, ಕಾರ್ಯದರ್ಶಿ ಸುರೇಶ್‍ ಮೌರಿ, ಎಸ್.ಜೆ.ಅಶೋಕ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.