ADVERTISEMENT

ನೀರಿನ ಕಳವಿನ ವಿರುದ್ಧ ಕಾರ್ಯಾಚರಣೆ ಆರಂಭ

ಪೈಪ್‌ಲೈನ್‌ಗೆ ಮೋಟಾರ್ ಅಳವಡಿಕೆ ಅನಧಿಕೃತ ಎಂದು ಎಚ್ಚರಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:00 IST
Last Updated 11 ಆಗಸ್ಟ್ 2020, 4:00 IST

ಮೈಸೂರು: ಕುಡಿಯುವ ನೀರನ್ನು ಕಳವು ಮಾಡುವವರ ವಿರುದ್ಧ ಪಾಲಿಕೆ, ವಾಣಿವಿಲಾಸ ನೀರು ಸರಬರಾಜು ಕೇಂದ್ರ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಸೋಮವಾರ ಆರಂಭಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಕುರುಬಾರಹಳ್ಳಿಯಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳ ಕಾರ್ಯಪಡೆಯು ಕುಡಿಯುವ ನೀರಿನ ಮುಖ್ಯಪೈಪ್‌ಲೈನ್‌ಗೆ ಅಳವಡಿಸಿದ್ದ 8 ಮೋಟಾರ್‌ಗಳನ್ನು ವಶಪಡಿಸಿಕೊಂಡಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್, ‘ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ, ಈ ರೀತಿ ಮೋಟಾರ್ ಅಳವಡಿಸಿಕೊಂಡು ನೀರನ್ನು ಕಳವು ಮಾಡಲಾಗುತ್ತಿದೆ. ಇನ್ನು ಮುಂದೆ ನಗರದೆಲ್ಲೆಡೆ ಕಾರ್ಯಾಚರಣೆ ಕೈಗೊಂಡು ಎಲ್ಲ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು. ಒಂದು ವೇಳೆ ಮತ್ತೆ ಇಂತಹ ಕೃತ್ಯಕ್ಕೆ ಕೈ ಹಾಕಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ವ್ಯಕ್ತಿ ಶವ ಪತ್ತೆ

ಮೈಸೂರು: ಇಲ್ಲಿನ ದೇವರಾಜ ಅರಸು ರಸ್ತೆಯಲ್ಲಿನ ಪಾಲಿಕೆಯ ಶೌಚಾಲಯದ ಮೆಟ್ಟಿಲುಗಳ ಮೇಲೆ ಅಸ್ವಸ್ಥರಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇವರ ಗುರುತು ಪತ್ತೆಯಾಗಿಲ್ಲ. 55–60 ವರ್ಷ ವಯಸ್ಸಿನ ಇವರು ಮೇಲ್ನೋಟಕ್ಕೆ ಅತಿಯಾಗಿ ಮದ್ಯಪಾನ ಮಾಡಿದಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ವಾಹನ ವಾಪಸ್ ಪಡೆಯಲು ಪೊಲೀಸರ ಮನವಿ

ಬೇರೆ ಬೇರೆ ಕಾರಣಗಳಿಂದ ವಶಪಡಿಸಿಕೊಂಡ 49 ದ್ವಿಚಕ್ರ ವಾಹನಗಳನ್ನು ಮಾಲೀಕರು ಸೂಕ್ತ ದಾಖಲೆಯನ್ನು ನೀಡಿ ವಾಪಸ್ ಪಡೆಯಬೇಕು ಎಂದು ಕೆ.ಆರ್.ಸಂಚಾರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

ಒಂದು ವೇಳೆ ವಾಹನವನ್ನು ವಾಪಸ್ ಪಡೆಯದೇ ಹೋದರೆ ನ್ಯಾಯಾಲಯದ ಅನುಮತಿ ಪಡೆದ ವಾಹನಗಳನ್ನು ಹರಾಜು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಮಾಹಿತಿಗೆ ದೂ: 0821– 2418339ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.