ADVERTISEMENT

6 ಗ್ರಾಮಗಳಲ್ಲಿ ಜಲಾನಯನ ಅಭಿವೃದ್ಧಿ ಘಟಕ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಚಾಲನೆ ನೀಡಿದ ಸಂಸದ ಯದುವೂರ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:44 IST
Last Updated 3 ಡಿಸೆಂಬರ್ 2025, 7:44 IST
ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಶಾಸಕ ಜಿ.ಡಿ.ಹರೀಶ್‌ ಗೌಡ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ರೈತರಿಗೆ ವಿವಿಧ ಯೋಜನೆ ಅಡಿಯಲ್ಲಿ ಕೃಷಿ ಯಂತ್ರೋಪಕರಣ ಹಸ್ತಾಂತರಿಸಿದರು
ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಶಾಸಕ ಜಿ.ಡಿ.ಹರೀಶ್‌ ಗೌಡ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ರೈತರಿಗೆ ವಿವಿಧ ಯೋಜನೆ ಅಡಿಯಲ್ಲಿ ಕೃಷಿ ಯಂತ್ರೋಪಕರಣ ಹಸ್ತಾಂತರಿಸಿದರು   

ಹುಣಸೂರು: ‘ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ  ಆದ್ಯತೆ ನೀಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ₹5 ಕೋಟಿ ಅನುದಾನ ನೀಡಿದೆ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ನಡೆದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಆಯ್ಕೆಗೊಂಡಿರುವ ಚಿಲ್ಕುಂದ, ಕರ್ಣಕುಪ್ಪೆ ಮತ್ತು ಕಲ್ಲಹಳ್ಳಿ ಪಂಚಾಯಿತಿಯ 13 ಗ್ರಾಮಗಳ ಕೃಷಿ ಫಲಾನುಭವಿಗಳಿಗೆ ₹ 1.75 ಕೋಟಿ ಮೊತ್ತದ ಸವಲತ್ತುಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

‘ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಈ ಹಿಂದೆ ಲಾಲ್ ಬಹದ್ದೂರ್‌ ಶಾಸ್ತ್ರಿ ಮತ್ತು ಜಗಜೀವನರಾಂ ಅವರು ಹಸಿರು ಕ್ರಾಂತಿ ಮೂಲಕ ದೇಶವು ಆಹಾರ ಸ್ವಾವಲಂಬನೆಗೆ ಕರೆ ನೀಡಿದ್ದರು. ವಿಶ್ವದಲ್ಲೇ ಅತಿ ಹೆಚ್ಚಿನ ಜನಸಂಖೆ ಹೊಂದಿರುವ ಭಾರತಕ್ಕೆ ಆಹಾರ ಕೊರತೆ ಎದುರಾಗದಂತೆ ಎಚ್ಚರವಹಿಸಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ ಹೆಗಲಿಗಿದ್ದು, ಅದಕ್ಕೆ ಪೂರಕವಾಗುವ ಕೃಷಿ ಯೋಜನೆ ಜಾರಿಗೊಳಿಸಿ ಆಹಾರ ಉತ್ಪತ್ತಿ ದ್ವಿಗುಣ ಮಾಡುವ ಚಿಂತನೆ ಪ್ರಧಾನಿ ಮೋದಿ ಹೊಂದಿದ್ದಾರೆ ಎಂದರು.

‘ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕರಣ ಮಾಡುವ ಉದ್ದೇಶದಿಂದ ಕೃಷಿ ಯಂತ್ರಗಳನ್ನು ಹೆಚ್ಚಿನ ಸಂಖೆಯಲ್ಲಿ ರೈತರು ಬಳಸಿ ಮಾನವಶಕ್ತಿ ತಗ್ಗಿಸಿ ಯಂತ್ರಗಳ ಸಹಾಯದಿಂದ ಉತ್ಪಾದನ ವೆಚ್ಚ ತಗ್ಗಿಸಲು ಈ ಯೋಜನೆ ಸಹಕಾರವಾಗಲಿದೆ’ ಎಂದರು.

ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅಡಿಯಲ್ಲಿ 6 ಕಿರು ಜಲಾನಯನ ಘಟಕ ಅಭಿವೃದ್ಧಿಪಡಿಸಿ ನೀರಿನ ಸೂಕ್ಷ್ಮತೆಯನ್ನು ಕಾದುಕೊಳ್ಳುವತ್ತ ಗಮನ ನೀಡಲಾಗಿದೆ.ಈ ಯೋಜನೆ ಅಡಿಯಲ್ಲಿ 6 ಗ್ರಾಮಗಳಲ್ಲಿ 2,500 ಹೆಕ್ಟೇರ್‌ ಪ್ರದೇಶ ಆಯ್ಕೆ ಮಾಡಿಕೊಂಡು ಮಳೆ ನೀರು ಇಂಗಿಸಿ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಸುವ ದಿಕ್ಕಿನಲ್ಲಿ ತೊಡಗಿದ್ದೇವೆ. ಆ ಗ್ರಾಮಗಳಲ್ಲಿನ ಶಾಲೆಗಳಿಗೆ ಹಸಿರು ಬೋರ್ಡ್‌ ಮತ್ತು ಆಸನವನ್ನು ವಿತರಿಸಿ ಗ್ರಾಮೀಣ ಶಾಲೆಗಳನ್ನು ಮತ್ತಷ್ಟು ಬಲವರ್ಧಿಸುವ ಕೆಲಸ ಕೈಗೊಂಡಿದೆ. ಕೃಷಿ ಯಾಂತ್ರಿಕರಣ ಯೋಜನೆ ಅಡಿಯಲ್ಲಿ ಕೇಂದ್ರ ಶೇ60 ಮತ್ತು ರಾಜ್ಯ ಶೇ 40ರಷ್ಟು ಅನುದಾನ ನೀಡಲಿದೆ. ಹುಣಸೂರು ತಾಲ್ಲೂಕಿಗೆ ₹ 68 ಲಕ್ಷದ ಉಪಕರಣ ವಿತರಿಸಲಾಗಿದೆ’ ಎಂದರು.

ಶಾಸಕ ಜಿ.ಡಿ.ಹರೀಶ್‌ ಗೌಡ ಮಾತನಾಡಿ, ‘ಜಲಾನಯನ ಯೋಜನೆ ರೈತರಿಗೆ ಉಪಯೋಗಕ್ಕೆ ಬರಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ₹ 67 ಲಕ್ಷ ಅನುದಾನದಲ್ಲಿ ರಿಯಾಯಿತಿ ದರದಲ್ಲಿ ಕೃಷಿ ಯಂತ್ರಗಳನ್ನು ನೀಡಲಾಗಿದೆ. ಈಗಾಗಲೇ ₹ 1.75 ಲಕ್ಷ ಅನುದಾನದಲ್ಲಿ ಕಳೆದ ಸಾಲಿನಲ್ಲಿ ಕೃಷಿ ಉಪಕರಣಗಳಿಗೆ ನೀಡಿ ರೈತರಿಗೆ ವಿತರಿಸಲಾಗಿದೆ’ ಎಂದರು.

‘50 ಮೇವು ಕತ್ತರಿಸುವ ಯಂತ್ರ, 10 ಡೀಸೆಲ್‌ ಯಂತ್ರ, 140 ರೈತರಿಗೆ ತುಂತುರು ನೀರಾವರಿ, ಭತ್ತ ಕಟಾವು ಯಂತ್ರ ನೀಡಲಾಗಿದೆ’ ಎಂದರು.

‘ಇದಲ್ಲದೆ ಕೃಷಿ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಗ್ರಾಮೀಣ ಭಾಗದ 15 ಅಂಗನವಾಡಿಗಳಿಗೆ ₹ 5 ಲಕ್ಷ ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಪೀಠೋಪಕರಣ ಮತ್ತು ಹಸಿರು ಬೋರ್ಡ್‌ ವಿತರಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ, ಉಪಕೃಷಿ ನಿರ್ದೇಶಕ ಧನಂಜಯ ಬಿ.ಎನ್.‌ ಕರ್ಣಕುಪ್ಪೆ, ಚಿಲ್ಕುಂದ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬಿಜೆಪಿ,ಜೆಡಿಎಸ್‌ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಹನಗೋಡು ಹೋಬಳಿ ಭಾಗದ ಕೆಲವು ಗ್ರಾಮದವರು ತಂಬಾಕು ಮಾರಾಟಕ್ಕೆ ಎಚ್.ಡಿ.ಕೋಟೆ ತಾಲ್ಲೂಕಿಗೆ ಹೋಗಬೇಕಿತ್ತು ಈಗ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಚಿಲ್ಕುಂದ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದೆ.
– ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.