ಮೈಸೂರು: ಬೇಸಿಗೆಯಲ್ಲಿ ಬರಿದಾಗಿ, ಮಳೆಗಾಲದಲ್ಲಿ ತುಂಬಿ ‘ನಗರ ಪ್ರವಾಹ’ಕ್ಕೆ ಕಾರಣವಾಗುವ ‘ಬೋಗಾದಿ ಕೆರೆ’ ಬಾನಾಡಿಗಳ ಆಗರ. ಆದರೀಗ ‘ತೇಲುಕಳೆ’ ಬಕಾಸುರ ಆವರಿಸಿದ್ದು, ಕೆರೆಯ ಜೀವ ವೈವಿಧ್ಯವನ್ನೇ ನುಂಗಲು ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ.
‘ಗಂಟೆ ಹೂವಿನ ಜೊಂಡು’, ‘ಅಂತರ ತಾವರೆ’, ‘ಅಂತರಗಂಗೆ’, ‘ಕತ್ತೆ ಕಿವಿ’ ಎಂದು ಕರೆಯಲಾಗುವ ‘ವಾಟರ್ ಹಯಸಿಂತ್’ ಬೋಗಾದಿ ಕೆರೆಯನ್ನು ತಬ್ಬಿದೆ. ದಕ್ಷಿಣ ಅಮೆರಿಕಾದ ಅಮೆಜಾನ್ ಜೌಗುಕಾಡಿನ ಈ ಸಸ್ಯ ಬಂಗಾಳ, ಕೇರಳದ ಜೌಗುಗಳನ್ನು ವ್ಯಾಪಿಸಿ, ಅಲ್ಲಿನ ಸ್ಥಳೀಯ ಜೀವ ವೈವಿಧ್ಯವನ್ನು ಇಲ್ಲವಾಗಿಸಿದೆ.
ವಿಜಯನಗರ, ಕೂರ್ಗಳ್ಳಿ, ಹೂಟಗಳ್ಳಿಯ ಒಳಚರಂಡಿ ನೀರು ರಾಜಕಾಲುವೆ ಸೇರಿ ನೇರವಾಗಿ ಕೆರೆಗೆ ಹರಿಯುತ್ತಿದ್ದು, ಕೊಳಚೆ ನೀರಿನಿಂದ ಸೊಂಪಾಗಿ ಈ ತೇಲುಕಳೆ ಬೆಳೆಯುತ್ತಿದೆ. ನಿಸರ್ಗ ನೀಡುತ್ತಿರುವ ಈ ಎಚ್ಚರಿಕೆ ಗಂಟೆಯನ್ನು ಆಡಳಿತ ವ್ಯವಸ್ಥೆ ಕೇಳಬೇಕಿದೆ.
ಒತ್ತಾಗಿ ಬೆಳೆಯುವ ಇದು, ದೇಸಿ ಶೈವಲಗಳನ್ನು ಇಲ್ಲವಾಗಿಸುತ್ತದೆ. ಹೀಗಾಗಿಯೇ ಇಲ್ಲಿ ಬಾತು, ನೀರುಕೋಳಿಗಳು ಸೇರಿದಂತೆ ನೀರುಹಕ್ಕಿಗಳು ಇಲ್ಲಿ ಕಾಣುತ್ತಿಲ್ಲ. ಆಮ್ಲಜನಕ ಮಟ್ಟವನ್ನು ಇಲ್ಲವಾಗಿಸುವುದರಿಂದ ಮೀನುಗಳು ಸೇರಿದಂತೆ ಜಲಚರಗಳು ಇಲ್ಲಿ ಸುಳಿಯುವುದಿಲ್ಲ.
‘ತಿಳಿ ಗುಲಾಬಿಯ ಹೂಗಳ ರಾಶಿ ಕಣ್ಣಿಗೆ ಖುಷಿ ನೀಡಿದರೂ, ಬಾನಾಡಿಗಳಿಗೆ ವೇದನೆ ತರುವ ಸಸ್ಯವನ್ನು ಇಲ್ಲವಾಗಿಸಬೇಕೆಂದರೆ, ಮಳೆ ನೀರು ಹರಿಯುವಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಪರಿಸರ ತಜ್ಞ ಮ್ಯಾನ್ ಮನು.
ಈಚೆಗೆ ಕೆರೆಗೆ ಭೇಟಿ ನೀಡಿದ್ದ ವಿಮರ್ಶಕ ರಹಮತ್ ತರೀಕೆರೆ, ‘ನೀರಿನ ಮೇಲೆ ಕೌದಿಯಂತೆ ಆಚ್ಛಾದಿಸಿಕೊಳ್ಳುವ ಆಕ್ರಮಣಕಾರಿ ಗುಣವುಳ್ಳ ಇದು ಪ್ರಳಯಾಂತಕ. ಇದರ ಪ್ರಫುಲ್ಲತೆ, ಕೆರೆಗಳನ್ನು ಚರಂಡಿಯಾಗಿಸಿದ ನಾಗರಿಕ ಸಮಾಜದ ಮೇಲೆ ನಿಸರ್ಗವು ಸೇಡು ತೀರಿಸಿಕೊಳ್ಳಲು ಸುಳಿಸುತ್ತಿರುವ ವ್ಯಂಗ್ಯದ ನಗೆಯಂತೆಯೂ ತೋರುತ್ತದೆ’ ಎಂದು ಫೇಸ್‌ಬುಕ್ ಖಾತೆಯಲ್ಲಿ ಹೇಳಿದ್ದರು.
ಸೆಲ್ಫಿ ತೆಗೆದುಕೊಳ್ಳಲು ಇಲ್ಲಿಗೆ ಬರುವವರೂ ಹೆಚ್ಚಾಗಿದ್ದಾರೆ. ಆಮ್ಲಜನಕ ಹೀರುವ ಬಕಾಸುರ ಕಳೆಯನ್ನು ಕಳೆಯುವ ಮಾರ್ಗವನ್ನೂ ಶೋಧಿಸಬೇಕಿದೆ.
ಹಸಿರು– ನೀಲಿ ವಲಯ ಆಗಲಿ: ಹಿನಕಲ್ ಕೆರೆ, ಬೋಗಾದಿ ಕೆರೆ, ಲಿಂಗಾಂಬುಧಿ ಕೆರೆ ಮಧ್ಯೆ ಇರುವ ಖಾಲಿ ಜಾಗಗಳನ್ನು ಉಳಿಸಿಕೊಂಡರೆ ಸುಂದರ ಹಸಿರು– ಜಲ ವಲಯ ಮೈಸೂರಿಗೆ ಸಿಗಲಿದೆ. ಮೂರು ದಶಕದ ಹಿಂದೆ ಕಬಿನಿ ನದಿಯ ಕಿರು ಉಪನದಿ ‘ಎಣ್ಣೆಹೊಳೆ’ಯ ಜಲಾಯನ ಪ್ರದೇಶವನ್ನು ಉಳಿಸಿಕೊಂಡರೆ ಮೈಸೂರಿನಲ್ಲಿಯೇ ಅಸ್ತಿತ್ವದಲ್ಲಿದ್ದ ನದಿಯೊಂದನ್ನು ಉಳಿಸಿದಂತಾಗುತ್ತದೆ.
ಕಾಡುವ ‘ನಗರ ಪ್ರವಾಹ’
ಹುಣಸೂರು ರಸ್ತೆ ಮಾರ್ಗವಿರುವ ಇಲವಾಲ ಎತ್ತರ ಭೂಮಿಯುದ್ಧಕ್ಕೂ ಬೀಳುವ ಮಳೆಯು ‘ಪೂರ್ಣಯ್ಯ ನಾಲೆ’ ಎಂಬ ಮಹಾರಾಜ ಕಾಲುವೆ ಮೂಲಕ ಕುಕ್ಕರಹಳ್ಳಿ ಕೆರೆ ಸೇರುತ್ತಿತ್ತು. ಮೈಸೂರು ಅಭಿವೃದ್ಧಿ ಪ್ರಾಧಿಕಾರ ಪಾಲಿಕೆ ನಿರ್ಲಕ್ಷ್ಯದಿಂದ ಒತ್ತುವರಿದಾರರು ಅದನ್ನು ಮುಚ್ಚಿಹಾಕಿದ್ದಾರೆ. ವಿಜಯನಗರ ಎಸ್‌ಜೆಸಿಇ ಕಾಲೇಜು ಬೋಗಾದಿ ಹಿನಕಲ್ ಹೂಟಗಳ್ಳಿಯಲ್ಲಿ ಬೀಳುವ ಮಳೆ ನೀರು ಬೋಗಾದಿ ಕೆರೆಗೆ ಸೇರುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಗರುಡಾಚಾರ್ ಬಡಾವಣೆ ಬೋಗಾದಿ ಎರಡನೇ ಹಂತ ಆನಂದ ನಗರ ಭಾಗಗಳಿಗೆ ನೀರು ನುಗ್ಗುತ್ತಿದೆ.
2022ರ ಮೇನಲ್ಲಿ ಭಾರಿ ಮಳೆಯಾಗಿ ಕೆರೆ ತುಂಬಿ ಕೋಡಿ ಬಿದ್ದು ನೀರು ನುಗ್ಗಿತ್ತು. ಬೋಗಾದಿ ಕೆರೆಯಿಂದ ಲಿಂಗಾಂಬುಧಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಸೇತುವೆ ನಾಗಲಿಂಗೇಶ್ವರ ದೇಗುಲದ ಬಳಿ ಕೊಚ್ಚಿಹೋಗಿತ್ತು. ನೀರಿನ ರಭಸಕ್ಕೆ ಆನಂದನಗರ ಸೇರಿದಂತೆ ಸುತ್ತಲಿನ ಪ್ರದೇಶ ಜಲಾವೃತಗೊಂಡಿದ್ದವು. ಆಗಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಆಗಿನ ಪಾಲಿಕೆ ಆಯುಕ್ತ ಈಗಿನ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದರು. ನಗರದ ತಗ್ಗು ಪ್ರದೇಶದಲ್ಲಿ ಮಳೆಯಿಂದ ಉಂಟಾಗುವ ಹಾನಿ ತಡೆಯಲು ಶಾಶ್ವತ ಪರಿಹಾರ ರೂಪಿಸುವ ಬಗ್ಗೆ ಚರ್ಚಿಸಿದ್ದರು. ಆದರೇನೂ ಕ್ರಮವಾಗಿಲ್ಲ ಎಂಬುದು ಇಲ್ಲಿಗೆ ಅವರೇ ಭೇಟಿ ನೀಡಿದರೆ ತಿಳಿಯುತ್ತದೆ. ಮಳೆಗಾಲಕ್ಕೂ ಮೊದಲೇ ಇತ್ತ ಬಂದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.