ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯ ಸಮೀಪದ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಸೋಮವಾರ ಕಾಣಿಸಿಕೊಂಡು ಆತಂಕ ಮೂಡಿಸಿದವು.
ಕಾಡಿನಿಂದ ಎರಡು ಆನೆಗಳು ಜಲಾಶಯದ ಹಿನ್ನೀರಿನ ಮೂಲಕ ಈಜಿಕೊಂಡು ಬೀಚನಹಳ್ಳಿ ಸಮೀಪ ಬರುತ್ತಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಬೀರ್ವಾಳು, ತೆರಣಿಮುಂಟಿ, ಬಿದರಹಳ್ಳಿ ಗ್ರಾಮಗಳ ಮೂಲಕ ಬಂದಿರುವ ಆನೆಗಳು ಕಬಿನಿ ಹಿನ್ನೀರಿನ ಬಳಿ ಬೀಡುಬಿಟ್ಟಿವೆ. ಅರಣ್ಯ ಅಧಿಕಾರಿಗಳು, ಅಣೆಕಟ್ಟು ಭದ್ರತಾ ಸಿಬ್ಬಂದಿ ಸೇರಿ ಆನೆಗಳನ್ನು ಓಡಿಸಲು ಸತತ ಪ್ರಯತ್ನ ಮಾಡಿದರು. ಆನೆಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನ ಸೇರಿದ್ದರು.
‘ಆನೆಗಳು ಎನ್. ಬೇಗೂರು ಅರಣ್ಯ ವಲಯ ವ್ಯಾಪ್ತಿಯಿಂದ ಬಂದಿರುವುದಾಗಿ ತಿಳಿದು ಬಂದಿದ್ದು, ಆ ಭಾಗದಲ್ಲಿ ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಕಾರಣ ಸಂಜೆ ಎನ್. ಬೇಗೂರು ಅರಣ್ಯಕ್ಕೆ ಅಟ್ಟಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.
ಎಚ್.ಡಿ.ಕೋಟೆ ಉಪವಲಯ ಅರಣ್ಯಾಧಿಕಾರಿ ಪರಮೇಶ್, ಆನೆ ಕಾರ್ಯಪಡೆ ಉಪವಲಯ ಅರಣ್ಯಾಧಿಕಾರಿ ನವೀನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.