ADVERTISEMENT

ಸಿಸೇರಿಯನ್ ಬಳಿಕ ಮಹಿಳೆ ಮೃತ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:54 IST
Last Updated 4 ಫೆಬ್ರುವರಿ 2026, 2:54 IST
ಕೆ.ಆರ್.ನಗರದ ಮಮತ ಗಂಗಾ ಹೆರಿಗೆ ಆಸ್ಪತ್ರೆ ಮುಂಭಾಗ ಮಂಗಳವಾರ ಪ್ರತಿಭಟನೆ ಮಾಡುತ್ತಿದ್ದ ರೈತ ಮುಖಂಡರನ್ನು ಮಂಗಳವಾರ ಬಂಧಿಸಲಾಯಿತು
ಕೆ.ಆರ್.ನಗರದ ಮಮತ ಗಂಗಾ ಹೆರಿಗೆ ಆಸ್ಪತ್ರೆ ಮುಂಭಾಗ ಮಂಗಳವಾರ ಪ್ರತಿಭಟನೆ ಮಾಡುತ್ತಿದ್ದ ರೈತ ಮುಖಂಡರನ್ನು ಮಂಗಳವಾರ ಬಂಧಿಸಲಾಯಿತು   

ಕೆ.ಆರ್.ನಗರ: ‘ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾರೆ. ಸೂಕ್ತ ಪರಿಹಾರವನ್ನೂ ನೀಡಿಲ್ಲ’ ಎಂದು ಆರೋಪಿಸಿ ಪಟ್ಟಣದ ಮಮತ ಗಂಗಾ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಸೋಮವಾರದಿಂದ ಪ್ರತಿಭಟಿಸುತ್ತಿದ್ದ ರೈತ ಮುಖಂಡರನ್ನು ಮಂಗಳವಾರ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ಹುಣಸೂರು ತಾಲ್ಲೂಕಿನ ಆಜಾದ್ ನಗರ, ನೆಲ್ಲೂರು ಪಾಳ್ಯ ನಿವಾಸಿ ನಹೀಮ್ ಖಾನ್ ಅವರ ಪತ್ನಿ ಶಾಹಿನ್ ತಾಜ್(33) ಮೃತ ಮಹಿಳೆ. ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ಇವರು, ಫೆ.1ರಂದು ಸಿಸೇರಿಯನ್‌ ಶಸ್ತ್ರಚಿಕಿತ್ಸೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದರು.

‘ಆಸ್ಪತ್ರೆಯ ವೈದ್ಯರಾದ ಡಾ.ಶಂಕರ್ ಸೋಮಯಾಜಿ, ಡಾ.ಶಮಂತಕ್ಕ ಸೋಮಯಾಜಿ ಅವರ ನಿರ್ಲಕ್ಷ್ಯದಿಂದ ಶಾಹಿನ್ ತಾಜ್ ಮೃತಪಟ್ಟಿದ್ದಾರೆ. ವೈದ್ಯರು ತಪ್ಪು ಮಾಡಿಲ್ಲವೆಂದರೆ ಮೃತ ಮಹಿಳೆಯ ಕುಟುಂಬಕ್ಕೆ ಯಾಕೆ ₹2.75 ಲಕ್ಷ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಮಗುವಿನ ಜೀವನಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ತಪ್ಪಿತಸ್ಥ ವೈದ್ಯರ ಲೈಸನ್ಸ್ ಅನ್ನು ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು.

ADVERTISEMENT

ಮಂಗಳವಾರ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ರಾಜಣ್ಣ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿ.ನಟರಾಜ್, ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಶಶಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಸ್ವಾಮೀಗೌಡ, ಮೋಹನಕುಮಾರ್ ಮತ್ತು ಸಿಬ್ಬಂದಿ, ‘ಪ್ರತಿಭಟನೆಯಿಂದ ಆಸ್ಪತ್ರೆಯಲ್ಲಿನ ರೋಗಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಪ್ರತಿಭಟನೆ ಕೈ ಬಿಟ್ಟು ಕಾನೂನಿನ ಪ್ರಕಾರ ಹೋರಾಟ ಮಾಡಿ’ ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಸ್ಪಂದಿಸದೇ ಇರುವುದರಿಂದ ಮುಂಜಾಗೃತ ಕ್ರಮವಾಗಿ ಬಂಧಿಸಿ ಬಿಡುಗಡೆ ಮಾಡಲಾಯಿತು.

ಕರ್ನಾಟಕ ರೈತ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ನಾಗರಾಜೇಗೌಡ, ಯುವ ಘಟಕದ ಅಧ್ಯಕ್ಷ ಫಯಾಜ್, ಗಂಗಾಧರ್, ಪಿರಿಯಾಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್, ಎಚ್.ಡಿ.ಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಮಹದೇವ್, ಹಾಸನ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ವಾಜಿದ್ ಪಾಷ, ಜಯರಾಮೇಗೌಡ, ರಾಮಚಂದ್ರ ಇದ್ದರು.

ತಪ್ಪು ನಡೆದಿಲ್ಲ: ‘ನಮ್ಮ ಆಸ್ಪತ್ರೆಯಲ್ಲಿ ನುರಿತ ವೈದ್ಯರಿದ್ದಾರೆ. ಸಿಸೇರಿಯನ್ ಸಂದರ್ಭದಲ್ಲಿ ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ, ಮಾನವೀಯತೆ ಆಧಾರದ ಮೇಲೆ ಮೃತ ಮಹಿಳೆಯ ಪತಿಗೆ ₹2.75 ಲಕ್ಷ ತಲುಪಿಸಲಾಗಿದೆ’ ಎಂದು ಡಾ.ಶಂಕರ್ ಸೋಮಯಾಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.