ADVERTISEMENT

ಮಹಿಳೆ ಕೊಲೆ: ಆರೋಪಿಗಳ ಬಂಧನ

ಆಸ್ತಿ ವಿಚಾರಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಒಪ್ಪಿಕೊಂಡ ಸಂಬಂಧಿಕರು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 6:38 IST
Last Updated 18 ಆಗಸ್ಟ್ 2020, 6:38 IST
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ನಿವಾಸಿ ಗಂಗಮ್ಮ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ನಿವಾಸಿ ಗಂಗಮ್ಮ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು   

ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಮಹಿಳೆಯೊಬ್ಬರ ಕೊಲೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ, ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ನಿವಾಸಿ ಗಂಗಮ್ಮ (44) ಕಾಣೆಯಾದ ಬಗ್ಗೆ ಬೆಟ್ಟದಪುರ ಠಾಣೆಯಲ್ಲಿ ದೂರು
ದಾಖಲಾಗಿತ್ತು.

‘ಗಂಗಮ್ಮನ ಪತಿ ಲೇಟ್‌ ವಿರೂಪಾಕ್ಷ ಅವರ ಅಣ್ಣ ಶಿವರಾಜ್, ಮತ್ತಿಬ್ಬರು ಅಣ್ಣನ ಮಕ್ಕಳಾದ ರವಿಶಂಕರ್, ರಾಜೇಶ ಮತ್ತು ಬಿ.ಬಿ. ಕಿರಣ್ ಹಾಗೂ ಬಿ.ಎಸ್. ಮಂಜುನಾಥ್, ಕೊಲೆ ಸುಪಾರಿ ಪಡೆದಿದ್ದ ಅರಕಲಗೂಡು ತಾಲ್ಲೂಕಿನ ಕಾಟಾಳುಬೋರೆ ಗ್ರಾಮದ ಕೆ.ಎನ್. ವೆಂಕಟೇಶ್ ಮತ್ತು ಬೆಂಗಳೂರಿನ ದಯಾನಂದ ನಗರದ ಕೆ.ಎಸ್. ಉಪೇಂದ್ರ ಅವರನ್ನು ಬಂಧಿಸಲಾಗಿದೆ’ ಎಂದು ಎಎಸ್‌ಪಿ ಶಿವಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಎಸ್‌ಪಿ ಸಿ.ಬಿ.ರಿಷ್ಯಂತ್, ಡಿವೈಎಸ್‌ಪಿ ಸುಂದರ್ ರಾಜ್ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ಸಿಪಿಐ ಬಿ.ಆರ್ ಪ್ರದೀಪ್ ನೇತೃತ್ವದ ತನಿಖಾ ತಂಡ ರಚಿಸಿ, ಆಸ್ತಿ ವಿಚಾರಕ್ಕೆ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ಕಲೆಹಾಕಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಗಂಗಮ್ಮ ಆ.3ರಂದು ಕಾಣೆಯಾ ಗಿದ್ದು, ಆಕೆಯ ಅಣ್ಣ ಗೋವಿಂದೇಗೌಡ ಆ.7ರಂದು ಕಾಣೆಯಾದ ಬಗ್ಗೆ ಬೆಟ್ಟದಪುರ ಠಾಣೆಗೆ ದೂರು ನೀಡಿದ್ದರು. ಗಂಗಮ್ಮ ಹಾಗೂ ಅವರ ಸಂಬಂಧಿಕರಿಗೂ ಆಸ್ತಿ ವಿಚಾರಕ್ಕೆ ಹಲವು ಬಾರಿ ಜಗಳವಾಗಿರುವ ಬಗ್ಗೆ ತಿಳಿಯಿತು. ಆಸ್ತಿಯನ್ನು ಯಾರಿಗೂ ಮಾರಾಟ ಮಾಡದೇ ನಮಗೆ ನೀಡಬೇಕು ಎಂದು ಮೃತ ಗಂಗಮ್ಮನ ಮೇಲೆ ಒತ್ತಡ ಹೇರಿದ್ದರು. ನಿರಾಕರಿಸಿದ ಗಂಗಮ್ಮರನ್ನು ಕೊಲೆ ಮಾಡುವಂತೆ ವೆಂಕಟೇಶ್‌ಗೆ ₹2 ಲಕ್ಷಕ್ಕೆ ಸುಪಾರಿ ನೀಡಿದ್ದು, 30 ಸಾವಿರ ಮುಂಗಡ ಹಣವನ್ನೂ ನೀಡಲಾಗಿತ್ತು. ವೆಂಕಟೇಶ್‌ ಎಂಬಾತ ಉಪೇಂದ್ರನಿಗೆ ಕೆಲಸ ವಹಿಸಿದ್ದ. ಮನೆಯಲ್ಲಿ ಒಂಟಿಯಾಗಿದ್ದ ಗಂಗಮ್ಮ ಅವರನ್ನು ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಕೆ.ಆರ್.ನಗರ ತಾಲ್ಲೂಕು ಹನಸೋಗೆ ಗ್ರಾಮದ ಕಾವೇರಿ ನದಿ ಸೇತುವೆ ಬಳಿ ಎಸೆದಿರುವುದು ತನಿಖೆಯಿಂದ ತಿಳಿದು ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಪ್ಟ್ ಕಾರು ಮತ್ತು ಆಟೊ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಆರ್ ಪ್ರದೀಪ್, ಬೆಟ್ಟದಪುರ ಎಸ್ಐ ಪುಟ್ಟರಾಜು, ಬೈಲುಕುಪ್ಪೆ ಎಸ್ಐ ಜಮೀರ್ ಅಹಮದ್, ಎಎಸ್ಐ ಸೋಮಶೇಖರ್, ಸಿಬ್ಬಂದಿ ಗಿರೀಶ್, ದಿಲೀಪ್, ರವೀಶ್, ಅಸ್ಲಾಂ ಪಾಷಾ, ಕುಮಾರಸ್ವಾಮಿ, ರಮೇಶ್, ಭಾಸ್ಕರ್, ಚಾಲಕರಾದ ಸ್ವಾಮಿ ಕಾಂತರಾಜು
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.