ಮೈಸೂರು: ‘ಮಹಿಳೆಯರ ಸಾಧನೆಗಳನ್ನು ಗುರತಿಸಿದಾಗ, ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ದೊರೆಯುತ್ತದೆ ಹಾಗೂ ನವೋದ್ಯಮಿಗಳಿಗೆ ಸ್ಫೂರ್ತಿ ದೊರೆಯುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ, ಹೋಟೆಲ್ ಮಾಲೀಕರ ಸಂಘ ಹಾಗೂ ಹೋಟೆಲ್ ಮಾಲೀಕರ ಧರ್ಮದತ್ತಿಯು ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಹೋಟೆಲ್ ಉದ್ಯಮಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಶ್ರಮಿಕರನ್ನು ಅಭಿನಂದಿಸಿ ಮಾತನಾಡಿದರು.
‘ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ಹೋಟೆಲ್ ಉದ್ಯಮ ಸುಲಭದ ಮಾತಲ್ಲ. ಎಲ್ಲಾ ವರ್ಗದವರನ್ನು ಅತಿಥಿ ದೇವೋಭವ ಎಂಬಂತೆ ಕಂಡು ಸೇವೆ ನೀಡುವುದು ಈ ಉದ್ಯಮದ ಉದ್ದೇಶವಾಗಿರಬೇಕು. ನಾನೂ ಹೋಟೆಲ್ ಹಾಗೂ ಸಕ್ಕರೆ ಕಾರ್ಖಾನೆ ಹೊಂದಿದ್ದು, ಉದ್ಯಮದಲ್ಲಿನ ಕ್ಲಿಷ್ಟತೆಯ ಅರಿವಿದೆ. ಇಲ್ಲಿ ಸ್ಥಾಪಿಸಿರುವ ಸಹಕಾರ ಬ್ಯಾಂಕ್ ಉದ್ಯಮದಲ್ಲಿನ ಅಡೆತಡೆಗಳಿಂದ ಪಾರಾಗಲು ಸಹಾಯಕವಾಗಿದೆ’ ಎಂದು ವಿವರಿಸಿದರು.
‘ಸಂಘಟನೆ, ಸಂಘ- ಸಂಸ್ಥೆಗಳನ್ನು ಕಟ್ಟುವುದು ಸವಾಲಿನ ಕೆಲಸ. ಆದರೆ ಅವುಗಳಿಂದ ಸಮಾಜಕ್ಕೆ ಅನೇಕ ಸಹಾಯಗಳಿವೆ. ಈ ಸಂಸ್ಥೆ ಮತ್ತಷ್ಟು ಬೆಳೆಯಲಿ’ ಎಂದರು.
ಹೋಟೆಲ್ ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ರವಿ ಶಾಸ್ತ್ರಿ, ಆನಂದ್ ಎಂ.ಶೆಟ್ಟಿ, ಸುಮಿತ್ರಾ ಎ. ತಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.