ADVERTISEMENT

ಮೈಸೂರು| ಆರೋಗ್ಯ ಸಂಸ್ಥೆಯಿಂದ ಜಾಗೃತಿ ಜಾಥಾ: ಮಕ್ಕಳು, ಮಹಿಳಾ ಶೋಷಣೆ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:40 IST
Last Updated 31 ಆಗಸ್ಟ್ 2025, 2:40 IST
ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಯಿತು
ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಯಿತು   

ಮೈಸೂರು: ‘ಹೆಣ್ಣುಮಕ್ಕಳ ಶೋಷಣೆ ನಿಲ್ಲಿಸಿ’, ‘ಬಾಲ್ಯವಿವಾಹ, ಭ್ರೂಣಹತ್ಯೆ ನಿಲ್ಲಿಸಿ’, ‘ಕೌಟುಂಬಿಕ ದೌರ್ಜನ್ಯ ತಡೆಯಿರಿ...’ ಎಂಬ ಘೋಷಣೆಗಳು ಇಲ್ಲಿನ ಅಶೋಕಪುರಂನ ರೈಲ್ವೆ ಮೈದಾನದಲ್ಲಿ ಮಾರ್ದನಿಸಿದವು.

ನಗರದ ಎನ್ಐಇ ಕಾಲೇಜು ಮುಂಭಾಗದಿಂದ ಮೈದಾನದವರೆಗೆ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ)ಯಿಂದ ಶನಿವಾರ ನಡೆದ ‘ಮಕ್ಕಳು ಮತ್ತು ಮಹಿಳೆಯರ ಮೇಲಿನ ಶೋಷಣೆ ತಡೆಗಟ್ಟುವಲ್ಲಿ ಯುವಜನರ ಪಾತ್ರ’ ಕುರಿತ ಜಾಗೃತಿ ಜಾಥಾದಲ್ಲಿ ಹಲವು ವಿದ್ಯಾರ್ಥಿಗಳು ಭಾಗಿಯಾದರು. 

ಅಂತರರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಚೈಲ್ಡ್‌ಫಂಡ್ ಇಂಟರ್‌ನ್ಯಾಶನಲ್ ಮತ್ತು ರೋಟರಿ ಸೆಂಟ್ರಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜಾಥಾಗೆ ಬೆಂಗಳೂರಿನ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಪ್ರೊ.ಆರ್. ಇಂದಿರಾ ರಾಮರಾವ್ ಚಾಲನೆ ನೀಡಿದರು.

ADVERTISEMENT

ಬಳಿಕ ಮಾತನಾಡಿದ ಅವರು, ‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಇಂದು ಬಿಗಿ ಕಾನೂನುಗಳು ಜಾರಿಗೆ ಬರುತ್ತಿವೆ. ಆದರೆ, ಮತ್ತೊಂದೆಡೆ ದೌರ್ಜನ್ಯವೂ ಹೆಚ್ಚುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಸಾಮಾಜಿಕ ತಾಲತಾಣಗಳ ಅತಿಯಾದ ಬಳಕೆಯು ಯುವಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯಯುತ ಚಿಂತನೆಯ ಯುವಜನರು ಮುಖ್ಯ’ ಎಂದರು.

‘ಕೆಲ ಕಾಲೇಜುಗಳಲ್ಲಿ ಪದವಿ ಕೋರ್ಸ್‌ ಪ್ರಾರಂಭದಲ್ಲಿ 60 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದರೂ ಅಂತಿಮ ವರ್ಷದ ವೇಳೆ 15 ಜನರು ಮಾತ್ರ ಇರುತ್ತಾರೆ. ಅರಿವಿನ ಕೊರತೆಯಿಂದ ಮಾಡುವ ಸ್ನೇಹ ಸಂಬಂಧಗಳು, ದುಶ್ಚಟಗಳು ಇದಕ್ಕೆ ಕಾರಣ. ಓದಿನ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಅನ್ಯಾಯವನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸುತ್ತಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಧ್ವನಿಯೆತ್ತಬೇಕು’ ಎಂದು ಸಲಹೆ ನೀಡಿದರು.

ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಅಧಿಕಾರಿ ಎಂ.ಎನ್‌.ನಟರಾಜ್‌, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ವಿಸ್ತರಣಾಧಿಕಾರಿ ಕೆ.ಶಿಲ್ಪಾ, ರೋಟರಿ ಸೆಂಟ್ರಲ್‌ ಮೈಸೂರು ಅಧ್ಯಕ್ಷ ಅಂತೋಣಿ ಮೋಸೆಸ್‌, ಕಾರ್ಯದರ್ಶಿ ಜ್ಯೋತಿ ಅಶೋಕ್‌, ಯುವಕರ ಸೇವಾ ನಿರ್ದೇಶಕ ಆರ್‌.ರಜನಿ, ಆರ್‌ಎಲ್‌ಎಚ್‌ಪಿ ಕಾರ್ಯದರ್ಶಿ ಪ್ರೊ.ವಿ.ಕೆ.ಜೋಸ್‌, ನಿರ್ದೇಶಕಿ ಕೆ.ಸರಸ್ವತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.