ADVERTISEMENT

ಸಾಲ ಮರುಪಾವತಿಗೆ ಕಿರುಕುಳ; ಮಹಿಳೆಯರಿಂದ ಪ್ರತಿಭಟನೆ

ರಾಷ್ಟ್ರೀಯ ಮಹಿಳಾ ಪರಿಷದ್ ನೇತೃತ್ವದಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 14:34 IST
Last Updated 25 ಸೆಪ್ಟೆಂಬರ್ 2020, 14:34 IST
ಮೈಕ್ರೋ ಫೈನಾನ್ಸ್‌ನವರ ಕಿರುಕುಳ ತಪ್ಪಿಸಲು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಪರಿಷದ್ ನೇತೃತ್ವದಲ್ಲಿ ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಶುಕ್ರವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮೈಕ್ರೋ ಫೈನಾನ್ಸ್‌ನವರ ಕಿರುಕುಳ ತಪ್ಪಿಸಲು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಪರಿಷದ್ ನೇತೃತ್ವದಲ್ಲಿ ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಶುಕ್ರವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ಖಾಸಗಿ ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ಮರುಪಾವತಿಗೆ ಹಾಗೂ ಬಡ್ಡಿ ಪಾವತಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಪರಿಷದ್‌ ನೇತೃತ್ವದಲ್ಲಿ ಮಹಿಳೆಯರು ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಹಿಂದೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ತುಳಿಯಬೇಕಾಯಿತು ಎಂದು ಸಂಘಟನೆಯ ಮೈಸೂರು ತಾಲ್ಲೂಕು ಅಧ್ಯಕ್ಷೆ ಶ್ವೇತಾ ಶೇಖರ್ ತಿಳಿಸಿದರು.

ಸಾಲ ಕೊಟ್ಟವರ ಕಿರುಕುಳ ಮೇರೆ ಮೀರಿದೆ. ಇದರಿಂದ ರೋಸಿ ಹೋದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು ಕಿರುಕುಳವನ್ನು ತಪ್ಪಿಸಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದರು.

ADVERTISEMENT

ಕೊರೊನಾ ಕಾರಣದಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಚಾಲಕರಿಗೆ ಉದ್ಯೋಗ ಇಲ್ಲ. ಆಟೊ ಚಾಲಕರಿಗೆ ಮೊದಲಿನಷ್ಟು ಬಾಡಿಗೆ ಸಿಗುತ್ತಿಲ್ಲ. ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡು, ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್ಲ ವಲಯದಲ್ಲೂ ಆರ್ಥಿಕ ಹಿಂಜರಿತ ಇದೆ. ಈ ಸನ್ನಿವೇಶದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ಸಾಲ ಮರುಪಾವತಿ ಮಾಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಕರುನಾಡು ರಕ್ಷಣಾ ವೇದಿಕೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪ್ರಿಯಾರಮೇಶ್, ಮಂಡ್ಯ ರಕ್ಷಣಾ ವೇದಿಕೆಯ ಅಧ್ಯಕ್ಷ ಶಂಕರ್‌ಬಾಬು, ಎನ್.ಆರ್.ಮೊಹಲ್ಲಾದ ಶ್ರೀಶಕ್ತಿ ಮಹಿಳಾ ಶಾಂತಿಧ್ವಜ ಸಂಘಟನೆಯ ಕಾರ್ಯಕರ್ತರು, ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ನಾಗರಾಜ್, ಚಾಲಕರ ಟ್ರೇಡ್ ಯೂನಿಯನ್‌ ಅಧ್ಯಕ್ಷ ಕೆ.ರವಿಚಂದ್ರ, ರಾಜ್ಯ ಒಕ್ಕಲಿಗರ ಕೆಂಪೇಗೌಡ ಯುವಶಕ್ತಿ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್‌ಗೌಡ ಬೆಂಬಲ ವ್ಯಕ್ತಪಡಿಸಿದ್ದರು.

ಪ್ರತಿಭಟನೆಯ ನಂತರ ಮತ್ತೊಮ್ಮೆ ಜಿಲ್ಲಾಧಿಕಾರಿ ಕಚೇರಿಗೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.