ADVERTISEMENT

ಮಹಿಳಾ ಸಬಲೀಕರಣ: ಕೆಂಪನಂಜಮ್ಮಣ್ಣಿ ಮುನ್ನುಡಿ: ಭೂಮಿಗೌಡ

ಮಹಾರಾಣಿ ವಿಜ್ಞಾನ ಕಾಲೇಜು: ಲೇಖಕಿ ಪ್ರೊ.ಸಬಿಹಾ ಭೂಮಿಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಮೇ 2024, 8:56 IST
Last Updated 17 ಮೇ 2024, 8:56 IST
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಸಬಿಹಾ ಭೂಮಿಗೌಡ ಉದ್ಘಾಟಿಸಿದರು. ಪ್ರೊ.ಎಂ.ಅಬ್ದುಲ್ ರಹಿಮಾನ್, ವಿವಿಧ ವೇದಿಕೆಗಳ ಪದಾಧಿಕಾರಿಗಳು ಹಾಜರಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಸಬಿಹಾ ಭೂಮಿಗೌಡ ಉದ್ಘಾಟಿಸಿದರು. ಪ್ರೊ.ಎಂ.ಅಬ್ದುಲ್ ರಹಿಮಾನ್, ವಿವಿಧ ವೇದಿಕೆಗಳ ಪದಾಧಿಕಾರಿಗಳು ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮೈಸೂರು ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ವಾಣಿವಿಲಾಸ ಸನ್ನಿಧಾನ ಎಂದೇ ಖ್ಯಾತರಾದ ಕೆಂಪನಂಜಮ್ಮಣ್ಣಿ ಮುನ್ನುಡಿ ಬರೆದರು’ ಎಂದು ಲೇಖಕಿ ಪ್ರೊ.ಸಬಿಹಾ ಭೂಮಿಗೌಡ ಹೇಳಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ‘ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜ ಹಾಗೂ ಕುಟುಂಬಕ್ಕೆ ಕಾಣಿಕೆ ನೀಡಬೇಕೆಂದು ವಾಣಿವಿಲಾಸ ಸನ್ನಿಧಾನ ಕನಸು ಕಂಡಿದ್ದರು. ಅದಕ್ಕಾಗಿ ಶಾಲೆಯನ್ನು ತೆರೆದರು’ ಎಂದು ಸ್ಮರಿಸಿದರು. 

‘ಮಹಿಳೆಯರಿಗೆ 180 ವರ್ಷಗಳ ಹಿಂದೆಯೇ ಶಿಕ್ಷಣ ನೀಡಲು ಸಾವಿತ್ರಿ ಬಾಯಿ ಫುಲೆ ಶ್ರಮಿಸಿದರು. ಅವರಂತೆಯೇ  ಬದುಕಲು ಪ್ರಯತ್ನಿಸಬೇಕು. ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು’ ಎಂದು ಸಲಹೆ ಮಾಡಿದರು.

ADVERTISEMENT

‘ನಿರ್ದಿಷ್ಟ ಮಾದರಿ ಇಟ್ಟುಕೊಂಡು ಗುರಿಯ ಕಡೆ ಸಾಗಬೇಕು. ಗುರಿ ಎಂಬುದು ಹೆಚ್ಚು ಅಂಕ ಗಳಿಕೆ ಮಾತ್ರವಲ್ಲ. ಉನ್ನತಮಟ್ಟದ ಉದ್ಯೋಗ ಗಳಿಸಿ ಸ್ವಾವಲಂಬನೆಯ ಹಾದಿ ಕಂಡುಕೊಳ್ಳಬೇಕು. ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕಿಕೊಡಬೇಕು’ ಎಂದರು.

‘ಎಲ್ಲಾ ಆದರ್ಶಮಯ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರ ಹಾದಿಯನ್ನು ಹಿಂಬಾಲಿಸುವುದಷ್ಟೇ ಅಲ್ಲ. ಹಕ್ಕುಗಳಿಗೆ ಚ್ಯುತಿಯಾದರೆ ದನಿ ಎತ್ತಬೇಕು. ತಂತಿಯ ಮೇಲಿನ ನಡಿಗೆ ಪ್ರತಿ ಹೆಣ್ಣಿನದಾಗಿದೆ. ಸನ್ನಿವೇಶವನ್ನು ದಿಟ್ಟತನದಿಂದ ಎದುರಿಸುವ ಛಾತಿ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ಎಂ.ಅಬ್ದುಲ್ ರಹಿಮಾನ್, ‘ಭಾರತದ ನೆಲಮೂಲದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಮಾನವೀಯ ಮೌಲ್ಯ ಎತ್ತಿ ಹಿಡಿಯುತ್ತದೆ’ ಎಂದರು.

ವೇದಿಕೆಗಳ ಪದಾಧಿಕಾರಿಗಳಾದ ವಿ.ಲಲಿತಾ, ಆರ್‌.ರಶ್ಮಿ, ಡಿ.ರಮಣಿ, ಮಂಜುಳಾ ಶೇಷಗಿರಿ, ಲಕ್ಷ್ಮಿ ಎಂ.ಪಲೋಟಿ, ಮೀನಾಕ್ಷಿ, ಶರಣ್ಯಾ, ಜಯಲಕ್ಷ್ಮಿ, ಅರ್ಚನಾ, ಕಾವ್ಯಾ ಎಂ. ಕಟ್ಟಿ, ಆರ್.ಮೇಘನಾ, ಎಂ.ಕೀರ್ತಿ, ಚೈತ್ರಾ, ಸಹನಾ, ಸಿಂಚನಾ, ಲಿಖಿತಾ, ಐಶ್ವರ್ಯ, ಶ್ರೀಮತಿ, ಹರ್ಷಿತಾ, ಮಮತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.